Asianet Suvarna News Asianet Suvarna News

IPL 2022: ಅಹಮದಾಬಾದ್‌ ತಂಡದ ಭವಿಷ್ಯ ಇಂದು ನಿರ್ಧಾರ..?

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸ 2 ತಂಡಗಳ ಸೇರ್ಪಡೆ

* ಅಹಮದಾಬಾದ್‌ ಫ್ರಾಂಚೈಸಿ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ

* ಸಿವಿಸಿ ಕ್ಯಾಪಿಟಲ್‌ ಸಂಸ್ಥೆಯು ಕ್ರೀಡಾ ಬೆಟ್ಟಿಂಗ್‌ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಆರೋಪ

IPL 2022 IPL Governing Council meeting fate of Ahmedabad franchise can be decided kvn
Author
Bengaluru, First Published Dec 3, 2021, 2:14 PM IST

ಕೋಲ್ಕತ(ಡಿ.03): ಬಿಸಿಸಿಐನ (BCCI) ಬಹು ಮುಖ್ಯ ಐಪಿಎಲ್‌ ಆಡಳಿತ ಮಂಡಳಿ ಸಭೆ ಶುಕ್ರವಾರ ಇಲ್ಲಿ ನಡೆಯಲಿದ್ದು, ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್‌ ತಂಡದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ಬಿಡ್ಡಿಂಗ್‌ನಲ್ಲಿ ಬರೋಬ್ಬರಿ 5,625 ಕೋಟಿ ರು. ನೀಡಿ ತಂಡದ ಖರೀದಿಸಿರುವ ಲುಕ್ಸೆಂಬರ್ಗ್‌ ಮೂಲದ ಸಿವಿಸಿ ಕ್ಯಾಪಿಟಲ್‌ (CVC Capital) ಸಂಸ್ಥೆಯು ಕ್ರೀಡಾ ಬೆಟ್ಟಿಂಗ್‌ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಕಾರಣ, ಆ ಸಂಸ್ಥೆ ಐಪಿಎಲ್‌ (IPL) ಮಾಲಿಕತ್ವ ನೀಡುವ ಬಗ್ಗೆ ಅಪಸ್ವರ ಎದ್ದಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಬಿಸಿಸಿಐ (BCCI) ಕಾರ‍್ಯದರ್ಶಿ ಜಯ್‌ ಶಾ (Jay Shah), ಖಜಾಂಚಿ ಅರುಣ್‌ ಧುಮಾಲ್‌, ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌, ಆಡಳಿತ ಮಂಡಳಿ ಸದಸ್ಯ ಪ್ರಗ್ಯಾನ್‌ ಓಝಾ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಸಿವಿಸಿ ತಂಡದ ಮಾಲಿಕತ್ವ ವಹಿಸಿಕೊಳ್ಳಲು ಅರ್ಹತೆ ಹೊಂದಿದೆಯೇ ಎನ್ನುವುದನ್ನು ತನಿಖೆ ಮಾಡಲು ಸ್ವತಂತ್ರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿದುಬಂದಿದೆ.

ಹರಾಜಿಗೂ ಮೊದಲು ಅಹಮದಾಬಾದ್‌ ಹಾಗೂ ಲಖನೌ ತಂಡಗಳು ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಅದಕ್ಕೆ ಡಿಸೆಂಬರ್ 25ರವರೆಗೂ ಸಮಯವಿದ್ದು, ಸಮಿತಿಯು ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸಬೇಕಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಹಮದಾಬಾದ್‌ಗೆ ಶ್ರೇಯಸ್‌, ಲಖನೌಗೆ ರಾಹುಲ್‌ ನಾಯಕ?

ನವದೆಹಲಿ: ಐಪಿಎಲ್‌ 15ನೇ ಆವೃತ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್‌ ತಂಡಗಳಿಗೆ ಮೆಗಾ ಹರಾಜಿಗೂ (IPL Mega Auction) ಮೊದಲೇ ತಲಾ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 25ರ ವರೆಗೂ ಗಡುವು ನೀಡಲಾಗಿದೆ. 

IPL 2022: ಆರ್‌ಸಿಬಿ ಮುಂದಿನ ನಾಯಕ ಯಾರು? ಮ್ಯಾಕ್ಸ್‌ವೆಲ್‌ಗೆ ಮಣೆಹಾಕಿದ ಡೆನಿಯಲ್ ವೆಟ್ಟೋರಿ !

ಲಖನೌ ತಂಡ ಕೆ.ಎಲ್‌.ರಾಹುಲ್‌(KL Rahul), ಅಹಮದಾಬಾದ್‌ ತಂಡ ಶ್ರೇಯಸ್‌ ಅಯ್ಯರ್‌ರನ್ನು (Shreyas Iyer) ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹರಾಜಿಗೆ ಲಭ್ಯವಿರುವ ಆಟಗಾರರ ಪೈಕಿ ಯಾರನ್ನು ಬೇಕಿದ್ದರೂ ಹೊಸ ತಂಡಗಳು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ತಂಡ ಸೇರಲು ಆಟಗಾರರ ಒಪ್ಪಿಗೆ ಕಡ್ಡಾಯ. ಮೂವರು ಆಟಗಾರರ ಆಯ್ಕೆಗೆ ಗರಿಷ್ಠ 33 ಕೋಟಿ ರು. ಖರ್ಚು ಮಾಡಲು ಬಿಸಿಸಿಐ ಅವಕಾಶ ನೀಡಿದೆ.

ಕೆಕೆಆರ್‌ ಸೋತರೆ ಶಾರುಖ್‌ ನನಗೆ ಬೈಯುತ್ತಿದ್ದರು: ಜೂಹಿ

ನವದೆಹಲಿ: ಕೋಲ್ಕತಾ ನೈಟ್‌ ರೈಡ​ರ್ಸ್‌ (Kolkata Knight Riders) ತಂಡ ಸೋತಾಗಲೆಲ್ಲಾ ತಂಡದ ಮಾಲಿಕ ಶಾರುಖ್‌ ಖಾನ್‌ (Shah Rukh Khan) ತಮ್ಮನ್ನು ಬೈಯುತ್ತಿದ್ದರು ಎಂದು ನಟಿ, ಕೆಕೆಆರ್‌ ಸಹ ಮಾಲಕಿ ಜೂಹಿ ಚಾವ್ಲಾ (Juhi Chawla) ಹೇಳಿದ್ದಾರೆ. ‘ತಂಡ ಸೋತಾಗ ಆಟಗಾರರ ಪ್ರದರ್ಶನಕ್ಕಾಗಿ ನನ್ನನ್ನು ಬೈಯುತ್ತಿದ್ದರು. ಬೌಲರ್‌ ಯಾವತ್ತೂ ಫೀಲ್ಡಿಂಗ್‌ ಪ್ರಕಾರ ಬೌಲ್‌ ಮಾಡಬೇಕು. ಆದರೆ ತಪ್ಪು ಮಾಡುತ್ತಿದ್ದಾರೆ. ಪಂದ್ಯ ಮುಗಿದ ಮೇಲೆ ತಂಡದ ಸಭೆ ನಡೆಸಬೇಕು ಎಂದು ಹೇಳಿ ನನಗೆ ಬೈಯುತ್ತಿದ್ದರು. ನಾನು ಕೇಳಿಸಿಕೊಂಡು ಸುಮ್ಮನೆ ಇರುತ್ತಿದ್ದೆ’ ಎಂದು ತಮಾಷೆಯ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ.

ಗೌತಮ್‌ ಗಂಭೀರ್ (Gautam Gambhir) ನಾಯಕತ್ವದಲ್ಲಿ ಕೋಲ್ಕತ ನೈಟ್‌ ರೈಡ​ರ್ಸ್‌ (KKR) ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಕೆಕೆಆರ್ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಇನ್ನು 2021ನೇ ಸಾಲಿನ ಐಪಿಎಲ್‌ ಟೂರ್ನಿಯ ಮೊದಲಾರ್ಧದಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಲು ವಿಫಲವಾಗಿತ್ತು. ಆದರೆ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಎದುರು ಮುಗ್ಗರಿಸುವ ಮೂಲಕ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Follow Us:
Download App:
  • android
  • ios