IPL 2022: ಡೆಲ್ಲಿ ತಂಡದಲ್ಲಿ ಮತ್ತೆ ಕೊರೋನಾ ಸ್ಪೋಟ..!
* 15ನೇ ಆವೃತ್ತಿಯ ಐಪಿಎಲ್ ಮೇಲೂ ಕೊರೋನಾ ವಕ್ರದೃಷ್ಠಿ
* ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಕೋವಿಡ್ ಅಟ್ಟಹಾಸ
* ಡೆಲ್ಲಿ ತಂಡದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್‌ಗೆ ಕೋವಿಡ್ ದೃಢ
ಮುಂಬೈ(ಏ.19): ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದಲ್ಲಿ ಮತ್ತೆ ಕೋವಿಡ್ ಸ್ಫೋಟಗೊಂಡಿದ್ದು, 15ನೇ ಆವೃತ್ತಿಯ ಟೂರ್ನಿಯ (Indian Premier League) ಮೇಲೆ ಮತ್ತೆ ಸೋಂಕಿನ ಕರಿನೆರಳು ಆವರಿಸಿದೆ. ತಂಡದ ಆಲ್ರೌಂಡರ್, ಆಸ್ಪ್ರೇಲಿಯಾದ ಮಿಚೆಲ್ ಮಾರ್ಷ್ (Mitchell Marsh) ಕೋವಿಡ್ ವರದಿ ಮತ್ತೊಮ್ಮೆ ಪಾಸಿಟಿವ್ ಬಂದಿರುವುದಾಗಿ ತಂಡ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಸೋಮವಾರ ಪ್ರಕಟಿಸಿದೆ. ಅಲ್ಲದೇ ಇತರ ಕೆಲ ಸಹಾಯಕ ಸಿಬ್ಬಂದಿಗೂ ಸೋಂಕು ದೃಢಪಟ್ಟಿರುವುದಾಗಿ ಮಾಹಿತಿ ನೀಡಿದೆ.
‘ಮಾರ್ಷ್ ಅವರ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ (RT-PCR Test) ಬಂದಿತ್ತು. ಆದರೆ 2ನೇ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದೆಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿದೆ. ಮಾರ್ಷ್ 10 ದಿನಗಳ ಕಾಲ ತಂಡದಿಂದ ದೂರ ಉಳಿಯಲಿದ್ದಾರೆ’ ಎಂದು ತಿಳಿಸಿದೆ. ಸಹಾಯಕ ಸಿಬ್ಬಂದಿಯಲ್ಲಿ ಸೋಂಕು ಪಯತ್ತೆಯಾಗಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಅವರ ಮೇಲೆ ವೈದ್ಯಕೀಯ ತಂಡ ತೀವ್ರ ನಿಗಾ ಇರಿಸಿದೆ. ನೆಗೆಟಿವ್ ಬಂದ ಬಾಕಿ ಎಲ್ಲಾ ಆಟಗಾರರನ್ನು ಹೋಟೆಲ್‌ನಲ್ಲೇ ಐಸೋಲೇಸನ್ ಮಾಡಲಾಗಿದ್ದು, ನಿರಂತರವಾಗಿ ಪರೀಕ್ಷೆ ನಡೆಸಲಾಗುತ್ತದೆ’ ಎಂದು ತಂಡ ಮಾಹಿತಿ ನೀಡಿದೆ. ಕೆಲ ದಿನಗಳ ಹಿಂದೆ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಚ್ ಅವರಲ್ಲಿ ಸೋಂಕು ಪತ್ತೆಯಾಗಿತ್ತು.
ಸೋಮವಾರದ ಕೋವಿಡ್ ಟೆಸ್ಟ್‌ನಲ್ಲಿ ಮಾರ್ಷ್ ರಿಪೋರ್ಟ್ ನೆಗೆಟಿವ್: ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಪ್ರೇಲಿಯಾದ ಮಿಚೆಲ್ ಮಾರ್ಷ್ ಕೋವಿಡ್ ವರದಿ ಸೋಮವಾರ ನೆಗೆಟಿವ್ ಬಂದಿದೆ. ಇದರೊಂದಿಗೆ ಐಪಿಎಲ್‌ಗೆ ಮೇಲೆ ಆವರಿಸಿದ್ದ ಕೋವಿಡ್ ಆತಂಕ ಸದ್ಯ ದೂರವಾಗಿದ್ದು, ಬುಧವಾರ ನಿಗದಿಯಂತೆ ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ನಡೆಯಲಿದೆ. ಅಲ್ಲದೇ ದಿನಗಳ ಹಿಂದಷ್ಟೇ ಸೋಂಕಿಗೆ ತುತ್ತಾಗಿದ್ದ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಚ್ ಅವರ ವರದಿಯೂ ನೆಗೆಟಿವ್ ಬಂದಿದೆ ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘ಮಾರ್ಷ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಪರೀಕ್ಷೆಗೆ ಒಳಗಾಗಿದ್ದ ಇತರೆ ಆಟಗಾರರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಬುಧವಾರದ ಪಂದ್ಯ ನಿಗದಿಯಂತೆ ನಡೆಯಲಿದೆ’ ಎಂದಿದ್ದಾರೆ. ಬಯೋಬಬಲ್ ಒಳಗಡೆಯೇ ಕೋವಿಡ್ ಕಾಣಿಸಿಕೊಂಡಿದ್ದರಿಂದ ಆಟಗಾರರು, ಸಿಬ್ಬಂದಿ ಮೇಲೆ ಬಿಸಿಸಿಐ ತೀವ್ರ ನಿಗಾ ಇಟ್ಟಿದೆ.
IPL 2022 ಸಾಲಲಿಲ್ಲ ಅಯ್ಯರ್ ಹೋರಾಟ, ಬಟ್ಲರ್ ಸೆಂಚುರಿಯಿಂದ ರಾಜಸ್ಥಾನಕ್ಕೆ ಒಲಿದ ಗೆಲುವು!
ಬಯೋಬಬಲ್ ಒಳಗಡೆಯೇ ಟೂರ್ನಿ ನಡೆಯುತ್ತಿದ್ದರೂ ಆಟಗಾರರು, ಸಿಬ್ಬಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು ಬಿಸಿಸಿಐ ತಲೆಬಿಸಿಗೆ ಕಾರಣವಾಗಿದೆ. ಕಳೆದ ವರ್ಷ ಭಾರತದಲ್ಲೇ ಐಪಿಎಲ್ ಆಯೋಜಿಸಿದ್ದ ಬಿಸಿಸಿಐ, ಹಲವು ಕೋವಿಡ್ ಪ್ರಕರಣಗಳು ಪತ್ತೆಯಾದ ಕಾರಣ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು. ಬಳಿಕ ಬಾಕಿ ಇದ್ದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಿತ್ತು. ಇದೀಗ ಈ ಬಾರಿ ಕೂಡಾ ಬಯೋಬಬಲ್‌ನೊಳಗೆ ಕೋವಿಡ್ ಪತ್ತೆಯಾಗಿರುವುದರಿಂದ ಸಂಪೂರ್ಣ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯುವ ಕುರಿತಂತೆ ಅನುಮಾನಗಳು ವ್ಯಕ್ತವಾಗತೊಡಗಿವೆ.