* ಗಾಯಗೊಂಡಿದ್ದ ಮಿಚೆಲ್ ಮಾರ್ಷ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆ* ಪಾಕಿಸ್ತಾನ ಪ್ರವಾಸದಲ್ಲಿದ್ದ ಮಿಚೆಲ್ ಮಾರ್ಷ್‌ಗೆ ಗಾಯ* ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿರುವಾಗಲೇ ಚೇತರಿಸಿಕೊಳ್ಳಲಿರುವ ಮಾರ್ಷ್‌

ಮುಂಬೈ(ಮಾ.30): ಈಗಾಗಲೇ ಬಲಿಷ್ಠ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಗೆದ್ದು ಬೀಗುತ್ತಿರುವ ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಆಸ್ಟ್ರೇಲಿಯಾದ ಸ್ಟಾರ್ ಅಲ್ರೌಂಡರ್ ಮಿಚೆಲ್ ಮಾರ್ಷ್‌ (Mitchell Marsh) ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಳ್ಳುವುದು ಖಚಿತ ಎನಿಸಿದೆ. ಪಾಕಿಸ್ತಾನ ಪ್ರವಾಸದಲ್ಲಿದ್ದ ಮಿಚೆಲ್ ಮಾರ್ಷ್‌, ಸೀಮಿತ ಓವರ್‌ಗಳ ಸರಣಿ ಆರಂಭಕ್ಕೂ ಮುನ್ನ ಗಾಯಗೊಂಡು ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಮಿಚೆಲ್ ಮಾರ್ಷ್ ಪಾಲ್ಗೊಳ್ಳುವುದು ಅನುಮಾನ ಎನಿಸಿತ್ತು. ಆದರೆ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

30 ವರ್ಷದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರನ್ನು ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 6.5 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಕಳೆದ ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಮಿಚೆಲ್ ಮಾರ್ಷ್‌ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಮಿಚೆಲ್ ಮಾರ್ಷ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದು, ಭಾರತದಲ್ಲಿಯೇ ಗಾಯದಿಂದ ಚೇತರಿಸಿಕೊಳ್ಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾತ್ ಮಾರ್ಗದರ್ಶನದಲ್ಲಿ ಮಿಚೆಲ್ ಮಾರ್ಷ್‌ ಚಿಕಿತ್ಸೆ ಪಡೆಯಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡಿಕೊಳ್ಳಲು ಮಿಚೆಲ್ ಮಾರ್ಷ್‌ ಭಾರತಕ್ಕೆ ತೆರಳಲಿದ್ದಾರೆ. ಅಲ್ಲಿ ಆಸ್ಟ್ರೇಲಿಯಾದ ಮಾಜಿ ಹಾಗೂ ನ್ಯೂ ಸೌಥ್ ವೇಲ್ಸ್ ತಂಡದ ಹಾಲಿ ಫಿಸಿಯೋ ಥೆರಪಿಸ್ಟ್‌ ಪ್ಯಾಟ್‌ ಫರ್ಹಾತ್‌ ಅವರು ಮಾರ್ಷ್ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಕ್ರಿಕೆಟ್ ಅಸ್ಟ್ರೇಲಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪಾಕಿಸ್ತಾನ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯವನ್ನು ಆಡಲಿದೆ. ಇದೀಗ ತಂಡದಿಂದ ಹೊರಬಿದ್ದಿರುವುದರಿಂದ ನಾನು ಆದಷ್ಟು ಬೇಗ ಈ ಗಾಯದಿಂದ ಚೇತರಿಸಿಕೊಳ್ಳುವತ್ತ ಐಸೋಲೇಷನ್‌ ಸಮಯದಲ್ಲಿ ಹೆಚ್ಚು ಗಮನ ಹರಿಸುತ್ತೇನೆ. ಪಾಕಿಸ್ತಾನ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿರುವುದಕ್ಕೆ ನನಗೆ ಬೇಸರವಾಗುತ್ತಿದೆ. ನಾನು ಆದಷ್ಟು ಬೇಗ ಚೇತರಿಸಿಕೊಂಡು ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮರು ಸೇರ್ಪಡೆಯಾಗಲು ಎದುರು ನೋಡುತ್ತಿದ್ದೇನೆ ಎಂದು ಮಿಚೆಲ್ ಮಾರ್ಷ್ ಹೇಳಿದ್ದಾರೆ.

ಒಂದು ವೇಳೆ ಮಿಚೆಲ್ ಮಾರ್ಷ್‌ ಗಾಯಕ್ಕೊಳಗಾಗದಿದ್ದರೆ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಪಂದ್ಯಗಳಿಂದ ಹೊರಗುಳಿಯುತ್ತಿದ್ದರು. ಇತ್ತೀಚಿಗಿನ ವರ್ಷಗಳಲ್ಲಿ ಮಿಚೆಲ್‌ ಮಾರ್ಷ್‌ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮಿಚೆಲ್ ಮಾರ್ಷ್‌ ಅಜೇಯ 77 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.