ಐಪಿಎಲ್ 2022 ಅಲ್ಲಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡ ಎನಿಸಿಕೊಂಡಿದೆ ಗುಜರಾತ್ ಟೈಟಾನ್ಸ್. ಅಂಕಪಟ್ಟಿಯ ಅಗ್ರಸ್ಥಾನಿ ಎನಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಗುಜರಾತ್ ತಂಡ ಪ್ಲೇ ಆಫ್ ಸ್ಥಾನವನ್ನು ಖಚಿತಮಾಡಿಕೊಂಡಿದೆ. 

ಪುಣೆ(ಮೇ.10): ಹಾಲಿ ವರ್ಷದ ಐಪಿಎಲ್ ಗೆ ಸೇರಿಕೊಂಡ ಎರಡು ಹೊಸ ತಂಡಗಳ ಪೈಕಿ ಒಂದಾದ ಹಾರ್ದಿಕ್ ಪಾಂಡ್ಯ (Hardik Pandya) ಸಾರಥ್ಯದ ಗುಜರಾತ್ ಟೈಟಾನ್ಸ್ (Gujarat Titans) ತಂಡ, ಐಪಿಎಲ್ 2022ರ ( IPL 2022 ) ಪ್ಲೇ ಆಫ್ ಅರ್ಹತೆಯನ್ನು ( Play Off ) ಅಧಿಕೃತಪಡಿಸಿಕೊಂಡ ಮೊದಲ ತಂಡ ಎನಿಸಿಕೊಂಡಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್ ಟೈಟಾನ್ಸ್ ( GT ), ಶುಭಮನ್ ಗಿಲ್ (63ರನ್, 49 ಎಸೆತ, 7 ಬೌಂಡರಿ) ತಾಳ್ಮೆಯ ಅರ್ಧಶತಕದ ನೆರವಿನಿಂದ 4 ವಿಕೆಟ್ ಗೆ 144 ರನ್ ಪೇರಿಸಿತು. ಪ್ರತಿಯಾಗಿ ಕೆಎಲ್ ರಾಹುಲ್ ( KL Rahul ) ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡ 13.5 ಓವರ್ ಗಳಲ್ಲಿ 82 ಪೇರಿಸಿ ಆಲೌಟ್ ಆಯಿತು. ಇದರೊಂದಿಗೆ ಗುಜರಾತ್ ಟೈಟಾನ್ಸ್ 62 ರನ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತು. 

ಯಶ್ ದಯಾಳ್ ಗೆ ಅದ್ಭುತ ಸಿಕ್ಸ್ ಸಿಡಿಸುವ ಮೂಲಕ ಫೈನ್ ಲೆಗ್ ನಲ್ಲಿ ಸಿಕ್ಸರ್ ಸಿಡಿಸಿದ್ದ ಕ್ವಿಂಟನ್ ಡಿ ಕಾಕ್ ಮರು ಎಸೆತದಲ್ಲಿಯೇ ಕ್ಯಾಚ್ ನೀಡಿ ಹೊರನಡೆಯುವ ಮೂಲಕ ಲಕ್ನೋ ತಂಡದ ವಿಕೆಟ್ ಪತನ ಆರಂಭಗೊಂಡಿತು. ಈ ಮೊತ್ತಕ್ಕೆ ಐದು ರನ್ ಸೇರಿಸುವ ವೇಳೆಗೆ ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ ವಿಕೆಟ್ ಅನ್ನೂ ಕಳೆದುಕೊಂಡಿತು. ಮೊಹಮದ್ ಶಮಿಯ ಬ್ಯಾಕ್ ಆಫ್ ಲೆಂತ್ ಎಸೆತವನ್ನು ಸ್ವೈಪ್ ಆಡುವ ಯತ್ನದಲ್ಲಿ ವಿಫಲವಾದ ರಾಹುಲ್, ವೃದ್ಧಿಮಾನ್ ಸಾಹಗೆ ಸುಲಭದ ಕ್ಯಾಚ್ ನೀಡಿದರು. ಪದಾರ್ಪಣೆ ಪಂದ್ಯವಾಡಿದ ಕರಣ್ ಶರ್ಮ, ಯಶ್ ದಯಾಳ್ ಗೆ 2ನೇ ವಿಕೆಟ್ ರೂಪದಲ್ಲಿ ಔಟಾಗುವ ವೇಳೆ ಲಕ್ನೋ ತಂಡ 33 ರನ್ ಬಾರಿಸಿತ್ತು.

ತಂಡದ ಮೊತ್ತ ಅರ್ಧಶತಕದ ಸನಿಹ ತಲುಪುತ್ತಿದ್ದ ವೇಳೆ, ರಶೀದ್ ಖಾನ್ ಹಾಕಿದ ರಾಂಗ್ ಆನ್ ಎಸೆತವನ್ನು ಆಡುವಲ್ಲಿ ಎಡವಿದ, ಕೃನಾಲ್ ಪಾಂಡ್ಯ ಬೌಲ್ಡ್ ಆಗಿ ನಿರ್ಗಮಿಸಿದರೆ, ಆಯುಷ್ ಬಡೋನಿ ಕೂಡ ಸಾಯಿ ಕಿಶೋರ್ ಎಸೆತದಲ್ಲಿ ಇಂಥದ್ದೇ ಪ್ರಯತ್ನ ಮಾಡಿ ಸ್ಟಂಪ್ ಔಟ್ ಆದರು. ಕೃನಾಲ್ ಪಾಂಡ್ಯ 5 ರನ್ ಬಾರಿಸಿದ್ದರೆ, ಆಯುಷ್ ಬಡೋನಿ 8 ರನ್ ಸಿಡಿಸಿದ್ದರು. ಇದು ಸಾಯಿ ಕಿಶೋರ್ ಅವರ ಚೊಚ್ಚಲ ಐಪಿಎಲ್ ವಿಕೆಟ್ ಎನಿಸಿದೆ.

ಈ ವೇಳೆ ತಂಡಕ್ಕೆ ಗೆಲುವು ನೀಡುವ ಭಾರ ಮಾರ್ಕಸ್ ಸ್ಟೋಯಿನಸ್ ಮೇಲಿತ್ತು. ಇನ್ನೊಂದು ಕಡೆ ಬ್ಯಾಟಿಂಗ್ ಮಾಡುತ್ತಿದ್ದ ದೀಪಕ್ ಹೂಡಾ, 2ನೇ ರನ್ ಕದಿಯುವ ಯತ್ನದಲ್ಲಿ ಮಾರ್ಕಸ್ ಸ್ಟೋಯಿನಸ್ ಅವರನ್ನು ಸುಲಭವಾಗಿ ರನೌಟ್ ಮಾಡಿಸಿದರು. ಇದಾದ ಬಳಿಕ ಲಕ್ನೋ ತಂಡ ಚೇಸಿಂಗ್ ಆಸೆ ಕೂಡ ಕೈಬಿಟ್ಟಿತು. ಜೇಸನ್ ಹೋಲ್ಡರ್ ಹಾಗೂ ಮೋಹ್ಸಿನ್ ಖಾನ್ ಮೂರು ರನ್ ಗಳ ಅಂತರದಲ್ಲಿ ಔಟಾದರೆ, 26 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್ ಬಾರಿಸಿದ್ದ ದೀಪಕ್ ಹೂಡಾ 9ನೇ ವಿಕೆಟ್ ರೂಪದಲ್ಲಿ ಔಟಾದರು. ಕೊನೆಯಲ್ಲಿ ಆವೇಶ್ ಖಾನ್ ಎದುರಿಸಿದ ಮೊದಲ ಎರಡು ಎಸೆತಗಳನ್ನು ಸಿಕ್ಸರ್ ಗಟ್ಟಿದರೂ ತಂಡದ ಸೋಲು ತಪ್ಪಿಸಲು ಸಾಕಾಗಲಿಲ್ಲ. ರಶೀದ್ ಖಾನ್ ಇವರ ವಿಕೆಟ್ ಉರುಳಿಸಿ ತಂಡಕ್ಕೆ ಜಯ ನೀಡಿದರು.