ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ಜಯನಾಲ್ಕು ವಿಕೆಟ್ ಉರುಳಿಸಿ ಮಿಂಚಿದ ಲಾಕಿ ಫರ್ಗ್ಯೂಸನ್ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದ ಶುಭ್ ಮಾನ್ ಗಿಲ್
ಪುಣೆ (ಏ.2): ಹಾಲಿ ಆವೃತ್ತಿಯ ಐಪಿಎಲ್ ನ (IPL 2022) ಮೊದಲ ಪಂದ್ಯದಲ್ಲಿ ಗೆಲುವು ಕಂಡ ತಂಡಗಳ ಮುಖಾಮುಖಿ ಎನ್ನುವ ಕಾರಣಕ್ಕಾಗಿ ಕುತೂಹಲ ಕೆರಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಗುಜರಾತ್ ಟೈಟಾನ್ಸ್ (Gujarat Titan) ಮುಖಾಮುಖಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡ 14 ರನ್ ಗಳ ಗೆಲುವು ಸಾಧಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (Maharashtra Cricket Association Stadium) ಮೈದಾನದಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ, ಶುಭ್ ಮಾನ್ ಗಿಲ್ (Shubman Gill) 84 ರನ್ (46 ಎಸೆತ, 6 ಬೌಂಡರಿ, 4 ಸಿಕ್ಸರ್) ಇನ್ನಿಂಗ್ಸ್ ನೆರವಿನಿಂದ 6 ವಿಕೆಟ್ ಗೆ 171 ರನ್ ಗಳ ದೊಡ್ಡ ಮೊತ್ತ ದಾಖಲಿಸಿತ್ತು. ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೋರಾಟ ನಡೆಸಿತಾದರೂ ಪ್ರಮುಖ ಹಂತದಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ 20 ಓವರ್ ಗಳಲ್ಲಿ 9 ವಿಕೆಟ್ ಗೆ 156 ರನ್ ಪೇರಿಸಿ ಸೋಲು ಕಂಡಿತು. ಆ ಮೂಲಕ ಲೀಗ್ ನಲ್ಲಿ ಮೊದಲ ಸೋಲು ಕಂಡಿತು.
ಶುಭ್ ಮಾನ್ ಗಿಲ್ ಅವರ ಸಾಹಸಿಕ ಇನ್ನಿಂಗ್ಸ್ ಮೂಲಕ ದೊಡ್ಡ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದ ಗುಜರಾತ್ ಟೈಟಾನ್ಸ್, ಬೌಲಿಂಗ್ ನಲ್ಲೂ ಕಮಾಲ್ ಮಾಡಿತ್ತು. ಚೇಸಿಂಗ್ ಆರಂಭ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 34 ರನ್ ಬಾರಿಸುವ ವೇಳೆಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. 5 ಎಸೆತಗಳಲ್ಲಿ 3 ರನ್ ಬಾರಿಸಿದ್ದ ಟಿಮ್ ಸೀಫರ್ಟ್, ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಅಭಿನವ್ ಮನೋಹರ್ ಗೆ ಕ್ಯಾಚ್ ನೀಡಿ ಹೊರನಡೆದರು, ಇದರ ಬೆನ್ನಲ್ಲಿಯೇ ಪೃಥ್ವಿ ಷಾ ಹಾಗೂ ಮಂದೀಪ್ ಸಿಂಗ್ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಈ ಹಂತದಲ್ಲಿ ಪೃಥ್ವಿ ಷಾ ಲಾಕಿ ಫರ್ಗುಸನ್ ಗೆ ವಿಕೆಟ್ ನೀಡಿದಾಗ ಡೆಲ್ಲಿ ಆತಂಕ ಕಂಡಿತ್ತು. 7 ಎಸೆತಗಳಲ್ಲಿ 1 ಬೌಂಡರಿ ಸಿಡಿಸಿದ್ದ ಪೃಥ್ವಿ ಷಾ, ವಿಜಯ್ ಶಂಕರ್ ಗೆ ಕ್ಯಾಚ್ ನೀಡಿದ್ದರು. ಈ ಮೊತ್ತಕ್ಕೆ 2 ರನ್ ಕೂಡಿಸುವ ವೇಳೆಗೆ 4 ಬೌಂಡರಿ ಸಿಡಿಸಿ ಗಮನಸೆಳೆಯುವಂಥ ಆಟವಾಡಿದ್ದ ಮಂದೀಪ್ ಸಿಂಗ್ ಕೂಡ ಔಟಾದರು.
ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡಕ್ಕೆ 4ನೇ ವಿಕೆಟ್ ಗೆ ಲಲಿತ್ ಯಾದವ್ ಹಾಗೂ ರಿಷಭ್ ಪಂತ್ ಅಮೂಲ್ಯ 61 ರನ್ ಜೊತೆಯಾಟವಾಡಿದರು. ರಿಷಭ್ ಪಂತ್ ಗೆ ಉತ್ತಮ ಸಾಥ್ ನೀಡಿದ ಲಲಿತ್ ಯಾದವ್ 25 ರನ್ (22 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿದರು. ತಂಡದ ಮೊತ್ತ 100ರ ಗಡಿ ದಾಟಲು 5 ರನ್ ಅಗತ್ಯವಿದ್ದಾಗ ಲಲಿತ್ ಯಾದವ್ ದೃರದೃಷ್ಟಕರ ರೀತಿಯಲ್ಲಿ ರನೌಟ್ ಆದರು.
IPL 2022 ಗಿಲ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿ ತಂಡಕ್ಕೆ 172 ರನ್ ಟಾರ್ಗೆಟ್!
ಈ ಹಂತದಲ್ಲಿ ತಂಡವನ್ನು ಜಯದತ್ತ ಮುನ್ನಡೆಸುವ ಜವಾಬ್ದಾರಿ ನಾಯಕ ರಿಷಭ್ ಪಂತ್ ಅವರ ಮೇಲಿತ್ತು. ನಿರೀಕ್ಷೆಯಂತೆ ಆಕರ್ಷಕ ಬೌಂಡರಿಗಳ ಮೂಲಕ ಉತ್ತಮವಾಗಿ ಆಡುತ್ತಿದ್ದ ರಿಷಭ್ ಪಂತ್ 43 ರನ್ (29 ಎಸೆತ, 7 ಬೌಂಡರಿ) ಬಾರಿಸಿ ತಂಡದ ಮೊತ್ತ 118 ರನ್ ಆಗಿದ್ದಾಗ ಔಟಾದರು.
IPL 2022 ಚಾಹಲ್ ಗೆ ಹ್ಯಾಟ್ರಿಕ್ ತಪ್ಪಿಸಿದ ಕರುಣ್, ಮುಂಬೈಗೆ ಸೋಲಿನ ಗಿಫ್ಟ್ ನೀಡಿದ ರಾಯಲ್ಸ್!
ರಿಷಭ್ ಪಂತ್ ಔಟಾದ ಬಳಿಕ ಡೆಲ್ಲಿ ಹೋರಾಟ ಬಹುಕಾಲ ಉಳಿಯಲಿಲ್ಲ. ಅಕ್ಷರ್ ಪಟೇಲ್ (8) ಹಾಗೂ ಶಾರ್ದೂಲ್ ಠಾಕೂರ್ (2) ಬಂದಷ್ಟೇ ವೇಗವಾಗಿ ನಿರ್ಗಮಿಸಿದರೆ, ರೋವ್ ಮನ್ ಪಾವೆಲ್ ಮಾತ್ರ ಕೆಲ ಕಾಲ ಜಯಕ್ಕೆ ಹೋರಾಟ ನಡೆಸಿದರು. 12 ಎಸೆತದಲ್ಲಿ 20 ರನ್ ಬಾರಿಸಿದ ಪಾವೆಲ್ 8ನೇ ವಿಕೆಟ್ ರೂಪದಲ್ಲಿ ನಿರ್ಗಮಿಸಿದಾಗ ಡೆಲ್ಲಿ ತಂಡದ ಸೋಲು ಖಚಿತಗೊಂಡಿತ್ತು.
