* ಲಖನೌ ಸೂಪರ್ ಜೈಂಟ್ಸ್ ತಂಡಕ್ಕಿಂದು ಪಂಜಾಬ್ ಕಿಂಗ್ಸ್ ಸವಾಲು* ಸ್ನೇಹಿತರಾದ ಮಯಾಂಕ್ ಅಗರ್‌ವಾಲ್ ಎದುರು ಕೆ.ಎಲ್. ರಾಹುಲ್ ಸೆಣಸಾಟ* ಕನ್ನಡದ ಇಬ್ಬರು ನಾಯಕರ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜು
ಪುಣೆ(ಏ.29): ಎರಡು ವರ್ಷ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಮುನ್ನಡೆಸಿದ್ದ ಕೆ.ಎಲ್.ರಾಹುಲ್ (KL Rahul), ಶುಕ್ರವಾರ ಅದೇ ತಂಡದ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ. ರಾಹುಲ್ ನೇತೃತ್ವದಲ್ಲಿ ಆಡುತ್ತಿರುವ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು, ಈ ಮುಖಾಮುಖಿಯಲ್ಲಿ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರ 4ರಲ್ಲೇ ಉಳಿಯಲು ಎದುರು ನೋಡುತ್ತಿದೆ. ಮತ್ತೊಂದೆಡೆ ರಾಹುಲ್‌ರ ಆಪ್ತ ಸ್ನೇಹಿತ, ಕರ್ನಾಟಕದ ಸಹ ಆಟಗಾರ ಮಯಾಂಕ್ ಅಗರ್‌ವಾಲ್ (Mayank Agarwal) ಪಂಜಾಬ್ ತಂಡವನ್ನು ಜಯದ ಗೆರೆ ದಾಟಿಸಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕೊಂಡೊಯ್ಯಲು ಕಾತರಿಸುತ್ತಿದ್ದಾರೆ. ಈ ಸ್ನೇಹಿತರ ಸವಾಲ್‌ಗೆ ಇಲ್ಲಿನ ಎಂಸಿಎ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಈ ಆವೃತ್ತಿಯಲ್ಲಿ 368 ರನ್ ಸಿಡಿಸಿರುವ ರಾಹುಲ್ ಮತ್ತೊಂದು ಸ್ಫೋಟಕ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದರೆ, ಅತಿಯಾದ ಆಕ್ರಮಣಕಾರಿ ಆಟಕ್ಕಿಂತ ಪರಿಸ್ಥಿತಿಗೆ ತಕ್ಕಂತೆ ಆಡುವುದರಿಂದ ಯಶಸ್ಸು ದೊರೆಯಲಿದೆ ಎನ್ನುವುದನ್ನು ಕಳೆದ ಪಂದ್ಯದಲ್ಲಿ ಅರಿತಿರುವ ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧವೂ ಅದೇ ರಣತಂತ್ರವನ್ನು ಬಳಸಬಹುದು.
ಪಂಜಾಬ್ ಕಿಂಗ್ಸ್ ತಂಡದ ಪರ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ (Shikhar Dhawan), ಮಯಾಂಕ್ ಅಗರ್‌ವಾಲ್, ಭನುಕಾ ರಾಜಪಕ್ಸಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೋವ್ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸುವ ಕ್ಷಮತೆ ಹೊಂದಿದ್ದಾರೆ. ರಿಷಿ ಧವನ್, ಕಗಿಸೊ ರಬಾಡ (Kagiso Rabada), ಆರ್ಶದೀಪ್ ಸಿಂಗ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಇನ್ನು ಲಖನೌ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದು, ಈಗಾಗಲೇ 368 ರನ್ ಬಾರಿಸಿದ್ದು, ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟಿದ್ದಾರೆ. ರಾಹುಲ್ ಜತೆಗೆ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್, ಮನೀಶ್ ಪಾಂಡೆ (Manish Pandey) ಕೈ ಜೋಡಿಸಿದರೆ, ದೊಡ್ಡ ಮೊತ್ತ ಕಲೆಹಾಕುವುದು ಲಖನೌ ತಂಡಕ್ಕೆ ಕಷ್ಟವಾಗಲಾರದು.
IPL 2022 ಜಯದ ಹಳಿಗೆ ಮರಳಿದ ಡೆಲ್ಲಿ, ಕೆಕೆಆರ್ ಗೆ ಸತತ 5ನೇ ಸೋಲು
ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಇದುವರೆಗೆ 8 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 3 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡವು ಆಡಿದ 8 ಪಂದ್ಯಗಳ ಪೈಕಿ ತಲಾ 4 ಗೆಲುವು ಹಾಗೂ 4 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆ.ಎಲ್ ರಾಹುಲ್(ನಾಯಕ), ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬದೋನಿ, ಜೇಸನ್ ಹೋಲ್ಡರ್, ದುಸ್ಮಂತ ಚಮೀರ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್‌ವಾಲ್(ನಾಯಕ), ಶಿಖರ್ ಧವನ್, ಭಾನುಕ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೋವ್, ಜಿತೇಶ್ ಶರ್ಮಾ, ರಿಶಿ ಧವನ್, ಕಗಿಸೋ ರಬಾಡ, ರಾಹುಲ್ ಚಹರ್, ಅಶ್‌ರ್‍ದೀಪ್ ಸಿಂಗ್, ಸಂದೀಪ್ ಶರ್ಮಾ.
ಸ್ಥಳ: ಪುಣೆ, ಎಂಸಿಎ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
