* ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್ ಸವಾಲು* ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಹತ್ವದ ಪಂದ್ಯ
ನವಿ ಮುಂಬೈ(ಮೇ.08): ಸನ್‌ರೈಸರ್ಸ್ ಹೈದರಾಬಾದ್ (Sunriser Hyderabad) ವಿರುದ್ಧ ಸಿಡಿಲಬ್ಬರದ ಆಟದ ಮೂಲಕ ಗೆಲುವಿನ ಹಳಿಗೆ ಮರಳಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಗೆಲ್ಲಬೇಕಿದೆ. ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ. ಸೂಪರ್ ಸಂಡೆಯ ಎರಡನೇ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ.
15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ತಲಾ 5 ಗೆಲುವು, ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ನೆಟ್ ರನ್‌ರೇಟ್ ಹೊಂದಿದೆ. ಬಾಕಿ ಇರುವ 4 ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಗೆದ್ದರೂ ಪ್ಲೇ-ಆಫ್ ಪ್ರವೇಶಿಸಲು ನೆಟ್ ರನ್‌ರೇಟ್ ಸಹಾಯಕ್ಕೆ ಬರಬಹುದು. 7 ಸೋಲು ಕಂಡು ಪ್ಲೇ-ಆಫ್ ಪೈಪೋಟಿಯಿಂದ ಬಹುತೇಕ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ಫೇವರಿಟ್ ಎನಿಸಿದೆ. ತಂಡ ಈ ಪಂದ್ಯದಲ್ಲಿ ಆರಂಭಿಕನ ಸ್ಥಾನಕ್ಕೆ ಪೃಥ್ವಿ ಶಾ ಅವರನ್ನು ಮರಳಿ ಕರೆತರುವ ಸಾಧ್ಯತೆ ಇದೆ. ಹಿಂದಿನ ಪಂದ್ಯದಲ್ಲಿ ಅವರನ್ನು ಕೈಬಿಟ್ಟು ಮನ್‌ದೀಪ್ ಸಿಂಗ್‌ರನ್ನು ಆಡಿಸುವ ಪ್ರಯೋಗ ಕೈಹಿಡಿದಿರಲಿಲ್ಲ. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೂಡಾ ಕಣಕ್ಕಿಳಿದಿರಲಿಲ್ಲ, ಆದರೆ ಇಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
IPL 2022: ಸನ್‌ರೈಸರ್ಸ್ ಎದುರು ಸೇಡಿಗೆ ಆರ್‌ಸಿಬಿ ಕಾತರ..!
ಕಳೆದ ಪಂದ್ಯದಲ್ಲಿ ಮನ್ದೀಪ್ ಸಿಂಗ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಸಹಾ ಡೇವಿಡ್ ವಾರ್ನರ್ ಹಾಗೂ ರೋಮನ್ ಪೊವೆಲ್ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡದ ಡೆಲ್ಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 23 ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 9 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಇನ್ನು 2018ರಿಂದೀಚೆಗೆ ಉಭಯ ತಂಡಗಳು ಒಟ್ಟು 10 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಡೆಲ್ಲಿ ಹಾಗೂ ಚೆನ್ನೈ ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಡೆಲ್ಲಿ ಕ್ಯಾಪಿಟಲ್ಸ್:
ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಭ್ ಪಂತ್, ರೋಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಏನ್ರಿಚ್ ನೊಕಿಯಾ, ಕುಲ್ದೀಪ್ ಯಾದವ್, ಖಲೀಲ್ ಯಾದವ್.
ಚೆನ್ನೈ ಸೂಪರ್ ಕಿಂಗ್ಸ್:
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಡ್ವೇನ್ ಪ್ರಿಟೋರಿಯಸ್, ಸಿಮರ್‌ಜಿತ್ ಸಿಂಗ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಸ್ಟೇಡಿಯಂ,
ಪಂದ್ಯ: ಸಂಜೆ 7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
