* ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲು* ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಆರ್‌ಸಿಬಿ* ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್‌ ಪ್ರದರ್ಶನದ ಮೇಲೆ ಎಲ್ಲರ ಚಿತ್ತ

ಮುಂಬೈ(ಮೇ.08): ಪ್ಲೇ-ಆಫ್‌ ರೇಸ್‌ ತೀವ್ರಗೊಳ್ಳುತ್ತಿದ್ದು, ರೇಸ್‌ನಲ್ಲಿರುವ ಆರ್‌ಸಿಬಿ ಹಾಗೂ ಸನ್‌ರೈಸ​ರ್ಸ್‌ ಹೈದರಾಬಾದ್‌ ಭಾನುವಾರ ಮುಖಾಮುಖಿಯಾಗಲಿವೆ. 11 ಪಂದ್ಯಗಳಿಂದ 12 ಅಂಕ ಕಲೆಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 10 ಪಂದ್ಯಗಳಿಂದ 10 ಅಂಕ ಗಳಿಸಿರುವ ಸನ್‌ರೈಸ​ರ್ಸ್ ಹೈದರಾಬಾದ್ ಎರಡೂ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವೆನಿಸಿದೆ.

ಸನ್‌ರೈಸ​ರ್ಸ್‌ ಹೈದರಾಬಾದ್ ವಿರುದ್ಧ ಈ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಕೇವಲ 68 ರನ್‌ಗೆ ಆಲೌಟ್‌ ಆಗಿತ್ತು. ಆ ಸೋಲು ತಂಡದ ನೆಟ್‌ ರನ್‌ರೇಟ್‌ ಕುಸಿಯಲು ಸಹ ಕಾರಣವಾಗಿತ್ತು. ಆರ್‌ಸಿಬಿ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇ-ಆಫ್‌ ಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗಲು ಕಾತರಿಸುತ್ತಿದೆ.

ಕೊಹ್ಲಿ, ಕೇನ್‌ ಮೇಲೆ ಕಣ್ಣು: ಆರ್‌ಸಿಬಿಯ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಹಾಗೂ ಸನ್‌ರೈಸ​ರ್ಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಇಬ್ಬರೂ ಸಾಧಾರಣ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದು, ನಿರ್ಣಾಯಕ ಹಂತದಲ್ಲಿ ದೊಡ್ಡ ಇನ್ನಿಂಗ್ಸ್‌ನೊಂದಿಗೆ ತಮ್ಮ ತಂಡಗಳಿಗೆ ನೆರವಾಗಲು ಎದುರು ನೋಡುತ್ತಿದ್ದಾರೆ. ಕೊಹ್ಲಿ 11 ಪಂದ್ಯಗಳಿಂದ 216 ರನ್‌ ಗಳಿಸಿದರೆ, ವಿಲಿಯಮ್ಸನ್‌ 10 ಪಂದ್ಯಗಳಲ್ಲಿ 199 ರನ್‌ ಕಲೆಹಾಕಿದ್ದಾರೆ.

ಹ್ಯಾಟ್ರಿಕ್‌ ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆರ್‌ಸಿಬಿ ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಸತತ 3 ಸೋಲು ಕಂಡಿರುವ ಸನ್‌ರೈಸ​ರ್ಸ್ ಪುಟಿದೇಳಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಮಾರ್ಕೊ ಯಾನ್ಸನ್‌ ಈ ಪಂದ್ಯದಲ್ಲಿ ಆಡಬಹುದು. ವಾಷಿಂಗ್ಟನ್‌ ಸುಂದರ್‌ ಗಾಯದಿಂದ ಚೇತರಿಸಿಕೊಂಡಿದ್ದು ಕಣಕ್ಕಿಳಿಯುವ ಸಾಧ್ಯತೆ ಇದೆ. ಆರ್‌ಸಿಬಿ ಯಾವುದೇ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಕಾಣುತ್ತಿಲ್ಲ.

IPL 2022: ಪಂಜಾಬ್ ಕಿಂಗ್ಸ್‌ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೂ 20 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 20 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್‌ ಪಾಟೀದಾರ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಶಾಬಾಜ್‌ ಅಹ್ಮದ್‌, ಮಹಿಪಾಲ್ ಲೋಮ್ರಾರ್‌, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಹರ್ಷಲ್ ಪಟೇಲ್‌, ಮೊಹಮ್ಮದ್ ಸಿರಾಜ್‌, ಜೋಶ್ ಹೇಜಲ್‌ವುಡ್‌.

ಸನ್‌ರೈಸ​ರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್‌(ನಾಯಕ), ಅಭಿಷೇಕ್ ಶರ್ಮಾ‌, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಶಶಾಂಕ್ ಶರ್ಮಾ‌, ವಾಷಿಂಗ್ಟನ್‌ ಸುಂದರ್‌, ಶ್ರೇಯಸ್ ಗೋಪಾಲ್‌, ಭುವನೇಶ್ವರ್ ಕುಮಾರ್‌, ಮಾರ್ಕೊ ಯಾನ್ಸನ್‌, ಉಮ್ರಾನ್ ಮಲಿಕ್‌.

ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌