* ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಸಿಎಸ್‌ಕೆ ಬ್ಯಾಟಿಂಗ್ ಆಯ್ಕೆ* ಉಭಯ ತಂಡಗಳಲ್ಲೂ ತಲಾ ಒಂದೊಂದು ಬದಲಾವಣೆ* ಲೀಗ್ ಹಂತದಲ್ಲಿ ಕೊನೆಯ ಪಂದ್ಯವನ್ನಾಡುತ್ತಿರುವ ಉಭಯ ತಂಡಗಳು

ಮುಂಬೈ‌(ಮೇ.20): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 68ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಬ್ರೆಬೊರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೆ, ಇನ್ನೊಂದೆಡೆ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಗೆಲುವಿನೊಂದಿಗೆ ಅಭಿಯಾನವನ್ನು ಮುಗಿಸಲು ಎದುರು ನೋಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಲೀಗ್ ಪಂದ್ಯವನ್ನಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶಿವಂ ದುಬೆ ಬದಲಿಗೆ ಅಂಬಟಿ ರಾಯುಡು ತಂಡ ಕೂಡಿಕೊಂಡಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲೂ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ಜೇಮ್ಸ್ ನೀಶಮ್ ಬದಲಿಗೆ ಶಿಮ್ರೊನ್ ಹೆಟ್ಮೇಯರ್ ತಂಡ ಕೂಡಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 13 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 5 ಸೋಲುಗಳೊಂದಿಗೆ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದರೆ ಮೊದಲ ಕ್ವಾಲಿಫೈಯರ್ ಆಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 9 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದು, ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. 

IPL 2022 ರಾಜಸ್ಥಾನ ರಾಯಲ್ಸ್‌ಗಿಂದು ಚೆನ್ನೈ ಸೂಪರ್‌ ಕಿಂಗ್ಸ್‌ ಸವಾಲು..!

ಹಲವು ಅನುಮಾನಗಳಿಗೆ ತೆರೆ ಎಳೆದ ಧೋನಿ: ಬಹುತೇಕ ಮಂದಿನ ಇಂದಿನ ಪಂದ್ಯವೇ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಕಟ್ಟಕಡೆಯ ಐಪಿಎಲ್ ಪಂದ್ಯವಾಗಲಿದೆ ಎಂದು ಭಾವಿಸಿದ್ದರು. ಆದರೆ ಟಾಸ್ ವೇಳೆ ಮಾತನಾಡಿದ ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ಪಾಲ್ಗೊಳ್ಳುವುದನ್ನು ಖಚಿತ ಪಡಿಸಿದ್ದಾರೆ. ಚೆನ್ನೈ ಮೈದಾನದಲ್ಲಿ ಕೊನೆಯ ಪಂದ್ಯವನ್ನಾಡದೇ ಹೋದರೆ ಸರಿಯಾಗುವುದಿಲ್ಲ, ಹಾಗಾಗಿ ಖಂಡಿತವಾಗಿಯೂ ಮುಂದಿನ ವರ್ಷ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುವ ಮೂಲಕ ಕ್ಯಾಪ್ಟನ್ ಕೂಲ್ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ

ತಂಡಗಳು ಹೀಗಿವೆ ನೋಡಿ

ಚೆನ್ನೈ ಸೂಪರ್ ಕಿಂಗ್ಸ್‌: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ಎನ್‌ ಜಗದೀಶನ್, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ(ನಾಯಕ& ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಸಿಮರ್‌ಜಿತ್ ಸಿಂಗ್, ಪ್ರಶಾಂತ್ ಸೋಲಂಕಿ, ಮತೀಶಾ ಪತಿರಣ, ಮುಕೇಶ್ ಚೌಧರಿ.

ರಾಜಸ್ಥಾನ ರಾಯಲ್ಸ್‌: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ& ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್, ಒಬೆಡ್ ಮೆಕಾಯ್.

ಸ್ಥಳ: ಬ್ರೆಬೋರ್ನ್‌ ಕ್ರೀಡಾಂಗಣ,ಮುಂಬೈ 
ಪಂದ್ಯ: ಸಂಜೆ 7.30ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌