* ಡೆಲ್ಲಿ ಕ್ಯಾಪಿಟಲ್ಸ್‌ಗೆ 209 ರನ್‌ಗಳ ಗುರಿ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌* ಆಕರ್ಷಕ ಅರ್ಧಶತಕ ಚಚ್ಚಿದ ಡೆವೊನ್ ಕಾನ್‌ವೇ* ಡೆಲ್ಲಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ

ನವಿ ಮುಂಬೈ(ಮೇ.08): ಅರಂಭಿಕ ಬ್ಯಾಟರ್‌ ಡೆವೊನ್‌ ಕಾನ್‌ವೇ ಬಾರಿಸಿದ ಸ್ಪೋಟಕ ಅರ್ಧ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 6 ವಿಕೆಟ್ ಕಳೆದುಕೊಂಡು 208 ರನ್‌ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿರುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ರಿಷಭ್ ಪಡೆ ಮೆಟ್ಟಿ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಹೌದು, ಇಲ್ಲಿನ ಡಿವೈ ಪಾಟೀಲ್ ಅಕಾಡೆಮಿಯಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್‌ವೇ 10.6 ಓವರ್‌ಗಳಲ್ಲಿ 110 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು.

ಋತುರಾಜ್‌ ಗಾಯಕ್ವಾಡ್ ಕೇವಲ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 41 ರನ್ ಬಾರಿಸಿ ಏನ್ರಿಚ್‌ ನೊಕಿಯಾಗೆ ವಿಕೆಟ್‌ ಒಪ್ಪಿಸಿದರು. ಗಾಯಕ್ವಾಡ್‌ ಬಳಿಕ ಕ್ರೀಸ್‌ಗಿಳಿದ ಶಿವಂ ದುಬೆ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಶಿವಂ ದುಬೆ ಕೇವಲ 19 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 32 ರನ್ ಬಾರಿಸಿ ಮಿಚೆಲ್ ಮಾರ್ಷ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಆರಂಭಿಕ ಬ್ಯಾಟರ್‌ ಡೆವೊನ್ ಕಾನ್‌ವೇ ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಸಿದರು. ಎಡಗೈ ಬ್ಯಾಟರ್‌ ಕಾನ್‌ವೇ ಕೇವಲ 49 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 87 ರನ್ ಬಾರಿಸಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಅಂಬಟಿ ರಾಯುಡು ದೊಡ್ಡ ಹೊಡೆತ ಬಾರಿಸುವ ಯತ್ನದಲ್ಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮೋಯಿನ್ ಅಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಧೋನಿ 8 ಎಸೆತಗಳಲ್ಲಿ 21 ರನ್ ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.