ಸಂಕಷ್ಟದಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಆಘಾತ, IPL 2022 ಟೂರ್ನಿಗೆ ಜಡೇಜಾ ಡೌಟ್!
- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಜಡೇಜಾ
- ಐಪಿಎಲ್ 2022 ಟೂರ್ನಿಗೆ ಜಡೇಜಾ ಅನುಮಾನ
- ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತೀವ್ರ ಹಿನ್ನಡೆ
ಮುಂಬೈ(ಮೇ.11): ಐಪಿಎಲ್ 2022 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿ ಭಾರಿ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇಂಜುರಿಯಿಂದ ಕಳೆದ ಪಂದ್ಯದಲ್ಲಿ ಹೊರಗುಳಿದ ಮಾಜಿ ನಾಯಕ ರವೀಂದ್ರ ಜಡೇಜಾ, ಇನ್ನುಳಿದ ಪಂದ್ಯಗಳಿಗೆ ಲಭ್ಯವಾಗುವ ಸಾಧ್ಯತೆ ಕಡಿಮೆ.
ಇಂಜುರಿಯಿಂದ ಬಳಲುತ್ತಿರುವ ರವೀಂದ್ರ ಜಡೇಜಾಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ 2022ರ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಲಭ್ಯತೆ ಅನುಮಾನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಇನ್ನುಳಿದ 3 ಪಂದ್ಯಗಳಲ್ಲಿ ದಿಟ್ಟ ಹೋರಾಟ ನೀಡಬೇಕಾದ ಅನಿವಾರ್ಯತೆಯಲ್ಲಿದೆ.
ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?
ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಹಿಂದೆ ಸರಿದ ರವೀಂದ್ರ ಜಡೇಜಾ ಇದೀಗ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಚೆನ್ನೈ ತಂಡಕ್ಕೆ ಇನ್ನೂ 3 ಪಂದ್ಯಗಳು ಬಾಕಿ ಇವೆ. ಮೂರು ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸಬೇಕಿದೆ. ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಇನ್ನುಳಿದ ಪಂದ್ಯಗಳನ್ನು ಸೋಲಬೇಕು. ಹೀಗಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರೇವಶಿಸಲಿದೆ. ಈ ಸಾಧ್ಯತೆ ತೀರಾ ವಿರಳವಾಗಿದೆ.
ಧೋನಿ ನಾಯಕತ್ವದಲ್ಲಿ ಗೆಲುವಿನ ಸಿಹಿ ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಾಕಿ ಉಳಿದಿರುವ ಮೂರ ಪಂದ್ಯಗಳನ್ನು ಗೆದ್ದರೆ ಸಾಲದು, ಇತರರ ಫಲಿತಾಂಶ ಮೇಲೆ ಅವಲಂಬಿತರಾಗಬೇಕು. ಇದರ ನಡುವೆ ಜಡೇಜಾ ಅನುಪಸ್ಥಿತಿಯೂ ತಂಡಕ್ಕೆ ಬಹುವಾಗಿ ಕಾಡಲಿದೆ.
ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?
ನಾಯಕತ್ವ ಒತ್ತಡದಿಂದ ಜಡೇಜಾ ಆಟದ ಮೇಲೆ ಪರಿಣಾಮ: ಧೋನಿ
ನಾಯಕತ್ವದ ಒತ್ತಡ ರವೀಂದ್ರ ಜಡೇಜಾ ಅವರ ಸಿದ್ಧತೆ ಹಾಗೂ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಆದರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಾವು ಅವರನ್ನು ಪ್ರೋತ್ಸಾಹಿಸಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್‌್ಸ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ. ಸನ್ರೈಸರ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಧೋನಿ, ತರಾತುರಿಯಲ್ಲಿ ಜಡೇಜಾಗೆ ನಾಯಕತ್ವ ವಹಿಸಲಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸುತ್ತ, ‘ಕಳೆದ ಆವೃತ್ತಿ ವೇಳೆಯೇ ತಾವು ಈ ವರ್ಷ ನಾಯಕರಾಗುವುದಾಗಿ ಜಡೇಜಾಗೆ ತಿಳಿದಿತ್ತು’ ಎಂದರು. ಇನ್ನು ಜಡೇಜಾ ನಾಯಕರಾದರೂ ಮೈದಾನದಲ್ಲಿ ನಿರ್ಧಾರಗಳು ಧೋನಿಯದ್ದೇ ಆಗಿರುತ್ತಿತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಧೋನಿ, ‘ಮೊದಲ 2 ಪಂದ್ಯಗಳಲ್ಲಿ ನಾನು ಮೇಲ್ವಿಚಾರಣೆ ನಡೆಸಿದೆ. ಆ ನಂತರ ಜಡೇಜಾಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಟ್ಟಿದ್ದೆ. ಒಮ್ಮೆ ನಾಯಕನಾಗಿ ಆಯ್ಕೆಯಾದರೆ ಪಂದ್ಯದ ಜೊತೆ ತಮ್ಮ ಆಟದ ಬಗ್ಗೆಯೂ ಕಾಳಜಿ ಇರಬೇಕು. ಕಠಿಣ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.
ಚೆನ್ನೈ ಆರ್ಭಟಕ್ಕೆ ಸುಸ್ತಾದ ಕ್ಯಾಪಿಟಲ್ಸ್
15ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೇರುವ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಚೆನ್ನೈ ಸೂಪರ್ ಕಿಂಗ್‌್ಸ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 91 ರನ್‌ಗಳ ಹೀನಾಯ ಸೋಲು ಅನುಭವಿಸಿದ ಡೆಲ್ಲಿ, ಲೀಗ್ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ.
ಈ ಸೋಲಿನಿಂದ ತಂಡದ ನೆಟ್ ರನ್‌ರೇಟ್ ಸಹ ಕುಸಿದಿದ್ದು, ಪ್ಲೇ-ಆಫ್ ರೇಸ್‌ನಲ್ಲಿರುವ ಉಳಿದ ತಂಡಗಳಿಗೆ ಲಾಭವಾಗಲಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ 17.4 ಓವರಲ್ಲಿ 117 ರನ್‌ಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜೊತೆ ಶ್ರೀಕರ್ ಭರತ್(08) ಇನ್ನಿಂಗ್‌್ಸ ಆರಂಭಿಸಿದರು. ಆದರೆ ಆರಂಭಿಕ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡಲಿಲ್ಲ. ವಾರ್ನರ್ 19 ರನ್ ಗಳಿಸಿ ಔಟಾದರು. ಬಳಿಕ ಸ್ವಲ್ಪ ಚೇತರಿಕೆ ಕಂಡ ಡೆಲ್ಲಿ, ಮಾಷ್‌ರ್(25) ವಿಕೆಟ್ ಪತನದ ಬಳಿಕ ದಿಢೀರ್ ಕುಸಿಯಿತು. 72 ರನ್‌ಗೆ 2 ವಿಕೆಟ್‌ನಿಂದ 117 ರನ್‌ಗೆ ಆಲೌಟ್ ಆಯಿತು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ 24 ರನ್ ಗಳಿಸಿ ತಂಡದ ಮೊತ್ತವನ್ನು 100 ರನ್ ದಾಟಿಸಿದರು. ಮೋಯಿನ್ ಅಲಿ 3, ಮುಕೇಶ್ ಚೌಧರಿ, ಡ್ವೇನ್ ಬ್ರಾವೋ, ಸಿಮರ್‌ಜೀತ್ ಸಿಂಗ್ ತಲಾ 2 ವಿಕೆಟ್ ಪಡೆದು ಚೆನ್ನೈ ಗೆಲುವಿಗೆ ಸಹಕರಿಸಿದರು