ಮುಂಬೈ(ಏ.24): ಆಧುನಿಕ ಕ್ರಿಕೆಟ್‌ನ ಅತ್ಯುನ್ನತ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಟೀವ್ ಸ್ಮಿತ್ ಕೂಡಾ ಒಬ್ಬರು. ಸ್ಟೀವ್ ಸ್ಮಿತ್ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೂಡಾ ಹೌದು, ಆದರೆ ಇದುವರೆಗೂ ಸ್ಮಿತ್ ಐಪಿಎಲ್ ಟ್ರೋಫಿ ಜಯಿಸಿಲ್ಲ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಮಿತ್‌, ಏಪ್ರಿಲ್‌ 18ರಂದು ಪಂಜಾಬ್‌ ಕಿಂಗ್ಸ್‌ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಮೊದಲ ಪಂದ್ಯವನ್ನಾಡಿದರು. ಕಳೆದೆರಡು ಪಂದ್ಯಗಳಲ್ಲಿ ಸ್ಮಿತ್ 42 ರನ್‌ ಬಾರಿಸಿದ್ದಾರೆ.

ಆಸೀಸ್‌ ಬಲಗೈ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಈ ವರ್ಷ ಐಪಿಎಲ್‌ ಟ್ರೋಫಿ ಎತ್ತಿಹಿಡಿಯುವ ಕನಸು ಕಾಣುತ್ತಿದ್ದಾರೆ. ಐಪಿಎಲ್ ಟ್ರೋಫಿ ಜಯಿಸುವುದು ತಮ್ಮ ಮುಂದಿರುವ ಪರಮ ಗುರಿ ಎಂದು ಸ್ಮಿತ್ ಹೇಳಿದ್ದಾರೆ. ಡೆಲ್ಲಿ ಆಟಗಾರರ ಜತೆ ಹೊಂದಿಕೊಳ್ಳುವುದು ಅಷ್ಟೇನು ಕಷ್ಟವಾಗಲಿಲ್ಲ. ಡೆಲ್ಲಿ ಉತ್ತಮ ತಂಡವನ್ನು ಹೊಂದಿದೆ. ನಾವೇನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ಈ ಬಾರಿ ಐಪಿಎಲ್ ಟ್ರೋಫಿ ಜಯಿಸುವುದು ನಮ್ಮ ಕಟ್ಟಕಡೆಯ ಗುರಿಯಾಗಿದೆ ಎಂದು ಸ್ಮಿತ್ ಹೇಳಿದ್ದಾರೆ.

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಟೀವ್ ಸ್ಮಿತ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ರಾಯಲ್ಸ್‌ ತಂಡ ಉತ್ತಮ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಫ್ರಾಂಚೈಸಿ ಸ್ಮಿತ್‌ರನ್ನು ತಂಡದಿಂದ ರಿಲೀಸ್ ಮಾಡಿತ್ತು. ಇದಾದ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಕೇವಲ 2.2 ಕೋಟಿ ರುಪಾಯಿ ನೀಡಿ ಸ್ಟೀವ್ ಸ್ಮಿತ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಡಾ. ರಾಜ್‌ ಕುಮಾರ್‌ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಕೋರಿ ಅಭಿಮಾನಿಗಳ ಮನಗೆದ್ದ ಆರ್‌ಸಿಬಿ
 
ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 1 ಸೋಲಿನೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಡೆಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಅಂದರೆ ಭಾನುವಾರ(ಏ.25) ನಡೆಯಲಿರುವ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.