ಪುಣೆ(ಮಾ.26): ಭಾರತದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದು, ಕೊನೆಯ 2 ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಏ.9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಐಪಿಎಲ್‌ನ ಮೊದಲ ಕೆಲ ಪಂದ್ಯಗಳಿಗೆ ಅವರು ಗೈರಾಗಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದರೂ, ಗಾಯದ ಪ್ರಮಾಣ ಹೆಚ್ಚಿರುವ ಕಾರಣ ಕನಿಷ್ಠ 6 ವಾರಗಳ ಕಾಲ ಅವರು ಕ್ರಿಕೆಟ್‌ನಿಂದ ದೂರವಿರಬೇಕಾಗಬಹುದು ಎನ್ನಲಾಗಿದೆ.

ಒಂದೊಮ್ಮೆ ಶ್ರೇಯಸ್‌ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾದರೆ ಕನಿಷ್ಠ 2ರಿಂದ 3 ತಿಂಗಳು ಕಾಲ ಅವರು ವಿಶ್ರಾಂತಿಯಲ್ಲಿ ಇರಲಿದ್ದಾರೆ. ಹೀಗಾಗಿ, ಮುಂಬರುವ ಐಪಿಎಲ್‌ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸುವವರು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ.

IPL 2021 ಟೂರ್ನಿ ಆರಂಭಕ್ಕೂ ಮುನ್ನವೇ ಡೆಲ್ಲಿಗೆ ಆಘಾತ; ನಾಯಕ ಸರಣಿಯಿಂದ ಔಟ್!

ಮೂವರ ನಡುವೆ ಪೈಪೋಟಿ: ನಾಯಕತ್ವದ ರೇಸ್‌ನಲ್ಲಿ ಅಜಿಂಕ್ಯ ರಹಾನೆ, ಆರ್‌.ಅಶ್ವಿನ್‌ ಹಾಗೂ ಸ್ಟೀವ್‌ ಸ್ಮಿತ್‌ ಇದ್ದಾರೆ. ಮೂವರಿಗೂ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಈ ಮೂವರ ಪೈಕಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದರೆ ಅದು ಅಶ್ವಿನ್‌. ತಂಡದ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ರಹಾನೆ ಹಾಗೂ ಸ್ಮಿತ್‌ ಕೆಲ ಪಂದ್ಯಗಳಿಗೆ ಹೊರಗುಳಿಯಬೇಕಾಗಬಹುದು. ಅಶ್ವಿನ್‌ ತಾಂತ್ರಿಕ ಜ್ಞಾನ ಹೊಂದಿದ್ದಾರೆ. ಅವರ ನಾಯಕತ್ವದ ಬಗ್ಗೆ ಕ್ರಿಕೆಟ್‌ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ, ಡೆಲ್ಲಿ ತಂಡ ಅಶ್ವಿನ್‌ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಬಹುದು.

ಯುವಕರಿಗೆ ಮಣೆ?: ತಂಡದ ಕೋಚ್‌ ರಿಕಿ ಪಾಂಟಿಂಗ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದವರು. ಅವರ ಕೋಚಿಂಗ್‌ ಶೈಲಿಯೂ ಅದೇ ಮಾದರಿಯಲ್ಲಿದೆ. ಹೀಗಾಗಿ, ಯುವ ಹಾಗೂ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದ ರಿಷಭ್‌ ಪಂತ್‌ ಇಲ್ಲವೇ ಪೃಥ್ವಿ ಶಾಗೆ ನಾಯಕತ್ವ ನೀಡುವ ಸಾಹಸಕ್ಕೆ ಕೈಹಾಕಿದರೆ ಅಚ್ಚರಿಯಿಲ್ಲ. ಪಂತ್‌, ನಾಯಕತ್ವದ ಅನುಭವ ಹೊಂದಿಲ್ಲವಾದರೂ ಅವರ ಮೇಲೆ ಡೆಲ್ಲಿ ತಂಡಕ್ಕೆ ವಿಶ್ವಾಸವಿದೆ. ಐಪಿಎಲ್‌ನಲ್ಲಿ ಅವರು ಕೇವಲ ಡೆಲ್ಲಿ ಪರವೇ ಆಡಿದ್ದಾರೆ. ಇನ್ನು ಪೃಥ್ವಿ ಶಾ, ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ತಂಡಕ್ಕೆ ಟ್ರೋಫಿ ದೊರಕಿಸಿಕೊಟ್ಟಿದ್ದರು. ಹೀಗಾಗಿ ಪೃಥ್ವಿ ಹೆಸರು ಸಹ ಚಾಲ್ತಿಯಲ್ಲಿದೆ.

ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಡೆಲ್ಲಿ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.