14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 22ನೇ ಪಂದ್ಯದಲ್ಲಿಂದು 2 ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಏ.27): ಸತತ 4 ಗೆಲುವು ಕಂಡು ಮುನ್ನುಗ್ಗುತ್ತಿದ್ದ ಆರ್‌ಸಿಬಿ, ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮುಗ್ಗರಿಸಿ ಹಿನ್ನಡೆ ಅನುಭವಿಸಿದೆ. ಹೀನಾಯ ಸೋಲಿನಿಂದ ಚೇತರಿಸಿಕೊಳ್ಳಲು ತಂಡಕ್ಕೆ ಹೆಚ್ಚಿನ ಸಮಯವಿಲ್ಲ. ಮುಂಬೈನಲ್ಲಿ ಪಂದ್ಯ ಮುಗಿಸಿ ಅಹಮದಾಬಾದ್‌ಗೆ ಬಂದಿಳಿದ ವಿರಾಟ್‌ ಕೊಹ್ಲಿ ಪಡೆ ಮಂಗಳವಾರ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಬಹುತೇಕ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಜಡೇಜಾ ಜಾದೂಗೆ ತಂಡ ಧೂಳೀಪಟವಾಗಿತ್ತು. ಆ ಆಘಾತದಿಂದ ತಂಡ ಹೊರಬರಬೇಕಿದೆ.

ತಂಡದಲ್ಲಿ ಕೆಲ ಬದಲಾವಣೆಯ ನಿರೀಕ್ಷೆ: ಕಳೆದ ಕೆಲ ಪಂದ್ಯಗಳಲ್ಲಿ ಆರ್‌ಸಿಬಿ 8 ಬೌಲಿಂಗ್‌ ಆಯ್ಕೆಗಳೊಂದಿಗೆ ಕಣಕ್ಕಿಳಿದಿತ್ತು. ಆಲ್ರೌಂಡರ್‌ ಡೇನಿಯಲ್‌ ಕ್ರಿಶ್ಚಿಯನ್‌ ಬದಲಿಗೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಫಿನ್‌ ಆ್ಯಲೆನ್‌ರನ್ನು ಆಡಿಸುವ ಮೂಲಕ ಬ್ಯಾಟಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳಬಹುದು. ವಾಷಿಂಗ್ಟನ್‌ ಸುಂದರ್‌ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿರುವ ಕಾರಣ, ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನ ಅವಶ್ಯಕತೆ ತಂಡಕ್ಕೆ ಇದ್ದೇ ಇದೆ. ಆ್ಯಲೆನ್‌ರನ್ನು ಆಡಿಸಿದರೆ ಮ್ಯಾಕ್ಸ್‌ವೆಲ್‌ ಹಾಗೂ ವಿಲಿಯ​ರ್ಸ್ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಬಹುದು. ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಇಬ್ಬರಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್‌ ಆಡಬೇಕಿದೆ.

ನಾಯಕ ಇಯಾನ್ ಮಾರ್ಗನ್ ಜವಾಬ್ದಾರಿಯುತ ಆಟ, ಕೆಕೆಆರ್‌ಗೆ 5 ವಿಕೆಟ್ ಗೆಲುವು!

ಸಿರಾಜ್‌ ಉತ್ತಮ ಲಯದಲ್ಲಿದ್ದು, ಪವರ್‌-ಪ್ಲೇನಲ್ಲಿ ಅವರಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಸುಂದರ್‌, ಕೈಲ್‌ ಜೇಮಿಸನ್‌ ಸಹ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ಆದರೆ ಬೌಲಿಂಗ್‌ ಟ್ರಂಪ್‌ ಕಾರ್ಡ್‌ ಎನಿಸಿರುವ ಯಜುವೇಂದ್ರ ಚಹಲ್‌ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಇದು ತಂಡದ ತೆಲೆಬಿಸಿ ಹೆಚ್ಚಿಸಿದೆ. ಕಳೆದ ಪಂದ್ಯದಲ್ಲಿ ಡೆತ್‌ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್‌ ಪಟೇಲ್‌ ದುಬಾರಿಯಾಗಿದ್ದರು. ಅವರಿಂದ ಸುಧಾರಿತ ಆಟ ನಿರೀಕ್ಷಿಸಲಾಗುತ್ತಿದೆ.

ಕಳೆದ ಪಂದ್ಯದಲ್ಲಿ ಐವರು ವೇಗಿಗಳನ್ನು ಆಡಿಸುವ ಮೂಲಕ ನಿಧಾನಗತಿ ಬೌಲಿಂಗ್‌ಗಾಗಿ ಕೊಹ್ಲಿ ದಂಡ ಹಾಕಿಸಿಕೊಂಡಿದ್ದರು. ಹೀಗಾಗಿ ಈ ಪಂದ್ಯದಲ್ಲಿ ನವ್‌ದೀಪ್‌ ಸೈನಿಯನ್ನು ಹೊರಗಿಟ್ಟು ಶಾಬಾಜ್‌ ಅಹಮದ್‌ರನ್ನು ಆಡಿಸಬಹುದು.

ಹೆಚ್ಚಿದೆ ಡೆಲ್ಲಿ ಆತ್ಮವಿಶ್ವಾಸ: ಸನ್‌ರೈಸ​ರ್ಸ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದು ಹ್ಯಾಟ್ರಿಕ್‌ ಗೆಲುವು ಸಂಪಾದಿಸಿದ ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಅಕ್ಷರ್‌ ಪಟೇಲ್‌ ಸೇರ್ಪಡೆ ತಂಡದ ಸ್ಪಿನ್‌ ಬೌಲಿಂಗ್‌ ಬಲವನ್ನು ಹೆಚ್ಚಿಸಿದೆ. ಧವನ್‌, ಪೃಥ್ವಿ ಶಾ, ಪಂತ್‌, ಸ್ಮಿತ್‌ ಎಲ್ಲರೂ ಲಯದಲ್ಲಿದ್ದಾರೆ. ಡೆಲ್ಲಿ ತಂಡವನ್ನು ಸೋಲಿಸಲು ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಬೇಕಿದೆ.

ಸಂಭವನೀಯ ತಂಡ:

ಆರ್‌ಸಿಬಿ: ಪಡಿಕ್ಕಲ್‌, ಕೊಹ್ಲಿ(ನಾಯಕ), ಮ್ಯಾಕ್ಸ್‌ವೆಲ್‌, ಡಿ ವಿಲಿಯರ್ಸ್‌, ವಾಷಿಂಗ್ಟನ್‌, ಕ್ರಿಶ್ಚಿಯನ್‌/ಆ್ಯಲೆನ್‌, ಶಾಬಾಜ್‌/ಸೈನಿ, ಜೇಮಿಸನ್‌, ಹರ್ಷಲ್‌, ಸಿರಾಜ್‌, ಚಹಲ್‌.

ಡೆಲ್ಲಿ: ಧವನ್‌, ಪೃಥ್ವಿ ಶಾ, ಸ್ಟೀವ್‌ ಸ್ಮಿತ್‌, ರಿಷಭ್‌ ಪಂತ್‌(ನಾಯಕ), ಹೆಟ್ಮೇಯರ್‌, ಸ್ಟೋಯ್ನಿಸ್‌, ಲಲಿತ್‌ ಯಾದವ್‌ ಅಕ್ಷರ್‌, ರಬಾಡ, ಅಮಿತ್‌ ಮಿಶ್ರಾ, ಆವೇಶ್‌ ಖಾನ್‌

ಸ್ಥಳ: ಅಹಮದಾಬಾದ್‌ 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್