ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಇಬ್ಬರು ಸ್ಟಾರ್ ಕ್ರಿಕೆಟಿಗರು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮಧ್ಯದಲ್ಲೇ ತೊರೆದು ತವರಿಗೆ ಮರಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಅಹಮದಾಬಾದ್‌(ಏ.27): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ 4 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಆಘಾತಕಾರಿ ಸೋಲುಂಡು ಮುಖಭಂಗ ಅನುಭವಿಸಿದೆ. ಈ ಶಾಕ್‌ನಿಂದ ಹೊರಬರುವ ಮುನ್ನವೆ ಆರ್‌ಸಿಬಿಯ ಇಬ್ಬರು ಕ್ರಿಕೆಟಿಗರು ಬಯೋಬಬಲ್‌ ತೊರೆದು ತವರಿಗೆ ಮರಳಿದ್ದಾರೆ.

ಹೌದು, ಆರ್‌ಸಿಬಿ ತಂಡದ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್‌ಸನ್‌ ವೈಯುಕ್ತಿಕ ಕಾರಣ ನೀಡಿ 14ನೇ ಆವೃತ್ತಿಯ ಟೂರ್ನಿಯನ್ನು ಅರ್ಧದಲ್ಲೇ ತೊರೆದು ತವರಿಗೆ ಮರಳಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಆರ್‌ಸಿಬಿ, ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್‌ಸನ್‌ ವೈಯುಕ್ತಿಕ ಕಾರಣಗಳಿಂದಾಗಿ ಆಸ್ಟ್ರೇಲಿಯಾಗೆ ವಾಪಾಸಾಗಿದ್ದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಆಡಳಿತ ಮಂಡಳಿಯು ಈ ಇಬ್ಬರು ಆಟಗಾರರ ನಿರ್ಧಾರವನ್ನು ಗೌರವಿಸಲಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದೆ. ಈ ಮೊದಲು ರಾಜಸ್ಥಾನ ರಾಯಲ್ಸ್‌ ವೇಗಿ ಆ್ಯಂಡ್ರೂ ಟೈ ಕೂಡಾ ವೈಯುಕ್ತಿಕ ಕಾರಣ ನೀಡಿ ಆಸ್ಟ್ರೇಲಿಯಾಗೆ ವಾಪಾಸಾಗಿದ್ದರು.

Scroll to load tweet…

ಕುಟುಂಬ ಸದಸ್ಯರಿಗೆ ಕೊರೋನಾ: IPLನಿಂದ ಹೊರ ಬಂದ ಅಶ್ವಿನ್

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಇಂದು(ಏ.27) ಪಂದ್ಯಕ್ಕೆ ಸಜ್ಜಾಗುತ್ತಿರುವ ಆರ್‌ಸಿಬಿ ತಂಡಕ್ಕೆ ಈ ಇಬ್ಬರು ಆಟಗಾರರ ಅಲಭ್ಯತೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇನ್‌ ರಿಚರ್ಡ್‌ಸನ್‌ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಇನ್ನು ಆ್ಯಡಂ ಜಂಪಾ ಒಂದೂ ಪಂದ್ಯವನ್ನಾಡದೇ ತವರಿಗೆ ಮರಳಿದ್ದಾರೆ.

ಈಗಾಗಲೇ ರವಿಚಂದ್ರನ್ ಅಶ್ವಿನ್‌, ಲಿಯಾಮ್ ಲಿವಿಂಗ್‌ಸ್ಟೋನ್‌, ಶಾನ್‌ ಮಾರ್ಶ್‌, ಜೋಶುವಾ ಫಿಲಿಫ್ಪಿ ಹಾಗೂ ಜೋಸ್ ಹೇಜಲ್‌ವುಡ್‌ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದನ್ನು ಸ್ಮರಿಸಬಹುದಾಗಿದೆ.