ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ; ಡೆಲ್ಲಿ vs ಹೈದರಾಬಾದ್ ಪಂದ್ಯ ಟೈ!
160 ರನ್ ಟಾರ್ಗೆಟ್, ಘಟಾನುಘಟಿ ಬ್ಯಾಟ್ಸ್‌ಮನ್‌ಗೆಳೆಲ್ಲಾ ಕೈಚೆಲ್ಲಿ ಕೂತಿದ್ದರು. ಆದರೆ ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ನೀಡಿದರು. ಅಂತಿಮ ಹಂತದಲ್ಲಿ ವಿಲಿಯಮ್ಸನ್ ಹಾಗೂ ಸುಚಿತ್ ಹೋರಾಟದಿಂದ ಪಂದ್ಯ ಟೈಗೊಂಡಿತು. ಇದೀಗ ಸೂಪರ್ ಓವರ್ .
ಚೆನ್ನೈ(ಏ.25): ಕೇನ್ ವಿಲಿಯಮ್ಸ್ ಏಕಾಂಗಿ ಹೋರಾಟ ಹಾಗೂ ಕನ್ನಡಿಗ ಜೆ ಸುಚಿತ್ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಟೈ ಮಾಡಿಕೊಂಡಿದೆ. ಡೆಲ್ಲಿ 4 ವಿಕೆಟ್ ಕಳೆದಕೊಂಡು 159 ರನ್ ಸಿಡಿಸಿದರೆ, ಹೈದರಾಬಾದ್ 7 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು.
160 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ವಾರ್ನರ್ 6 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಜಾನಿ ಬೈರ್‌ಸ್ಟೋ ಹಾಗೂ ಕೇನ್ ವಿಲಿಯಮ್ಸನ್ ಜೊತೆಯಾಟದಿಂದ ಹೈದಾಬಾದ್ ಚೇತರಿಸಿಕೊಂಡಿತು.
ಬೈರ್‌ಸ್ಟೋ 38 ರನ್ ಕಾಣಿಕೆ ನೀಡಿದರು. ಇತ್ತ ವಿಲಿಯಮ್ಸನ್ ಹೋರಾಟ ಮುಂದುವರಿಸಿದರು. ಆದರೆ ವಿಲಿಯಮ್ಸನ್‌ಗೆ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ವಿರಾಟ್ ಸಿಂಗ್, ಕೇದಾರ್ ಜಾದವ್, ಅಭಿಶೇಕ್ ಶರ್ಮಾ ಅಬ್ಬರಿಸದೆ ಹಿಂತಿರುಗಿದರು.
ರಶೀದ್ ಖಾನ್ ಹಾಗೂ ವಿಜಯ್ ಶಂಕರ್ ಕೂಡ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಆದರೆ ಕೇನ್ ವಿಲಿಯಮ್ಸನ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ತಾಳ್ಮೆಯಿಂದಲೇ ಪ್ರತಿ ಎಸೆತಕ್ಕೆ ಉತ್ತರ ನೀಡಿದರು. ಅಂತಿಮ ಹಂತದಲ್ಲಿ ಕನ್ನಡಿಗ ಜೆ ಸುಚಿತ್ ಬ್ಯಾಟಿಂಗ್ ಪ್ರದರ್ಶನ ಹೈದರಾಬಾದ್ ತಂಡದ ದಿಕ್ಕು ಬದಲಿಸಿತು.
ಕೇನ್ ವಿಲಿಯಮ್ಸನ್ ಹಾಗೂ ಜೆ ಸುಚಿತ್ ಹೋರಾಟ, ಡೆಲ್ಲಿ ತಂಡದ ಆತಂಕ ಹೆಚ್ಚಿಸಿತು. ಹೈದರಾಬಾದ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು ಸುಚಿತ್ ಸಿಕ್ಸರ್, ವಿಲಿಯಮ್ಸನ್ ಬೌಂಡರಿಯಿಂದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ಹೀಗಾಗಿ ಫಲಿತಾಂಶ ನಿರ್ಧಾರಕ್ಕೆ ಸೂಪರ್ ಓವರ್ ಮೊರೆ ಹೋಗಲಾಗಿದೆ.