ಮುಂಬೈ(ಮಾ.08): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತದಲ್ಲೇ ಐಪಿಎಲ್‌ ಟೂರ್ನಿ ಜರುಗಲಿದೆ. ಈ ಬಾರಿಯ ಐಪಿಎಲ್‌ ವೇಳಾಪಟ್ಟಿ ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ.

ಲೀಗ್‌ ಹಂತದ 56 ಪಂದ್ಯಗಳನ್ನು ಸರದಿ ಆಧಾರದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಮೊದಲಿಗೆ ಏಪ್ರಿಲ್ 9ರಿಂದ ಏಪ್ರಿಲ್ 25ರ ವರೆಗೂ ಚೆನ್ನೈ ಹಾಗೂ ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ. ಏಪ್ರಿಲ್‌ 26ರಿಂದ ಮೇ 8ರ ವರೆಗೂ ಅಹಮದಾಬಾದ್‌ ಹಾಗೂ ದೆಹಲಿ ಆತಿಥ್ಯ ನೀಡಲಿವೆ. ಮೇ 9ರಿಂದ ಮೇ 23ರ ವರೆಗೂ ಬೆಂಗಳೂರು ಹಾಗೂ ಕೋಲ್ಕತಾದಲ್ಲಿ ಪಂದ್ಯಗಳು ನಡೆಯಲಿವೆ. 

6 ನಗರ, ಬೆಂಗಳೂರಲ್ಲಿ 10 ಪಂದ್ಯ; IPL 2021 ಟೂರ್ನಿಯಲ್ಲಿದೆ ಕೆಲ ಬದಲಾವಣೆ!

ಇನ್ನು ಪಶ್ಚಿಮ ಬಂಗಾಳದದಲ್ಲಿ ಮೇ 6ರ ವರೆಗೂ ವಿಧಾನಸಭಾ ಚುನಾವಣೆ ನಡೆಯುವ ಕಾರಣ, ಕೋಲ್ಕತಾದಲ್ಲಿ ಮೇ 9ಕ್ಕೆ ಮೊದಲ ಪಂದ್ಯ ನಿಗದಿ ಮಾಡಲಾಗಿದೆ. ಮೇ 25ರಿಂದ ಪ್ಲೇ-ಆಫ್‌ ಹಂತ ನಡೆಯಲಿದೆ. ಮೇ 25ಕ್ಕೆ ಮೊದಲ ಕ್ವಾಲಿಫೈಯರ್‌, ಮೇ 26ಕ್ಕೆ ಎಲಿಮಿನೇಟರ್‌, ಮೇ 28ಕ್ಕೆ 2ನೇ ಕ್ವಾಲಿಫೈಯರ್‌ ಹಾಗೂ ಮೇ 30ಕ್ಕೆ ಫೈನಲ್‌ ಪಂದ್ಯ ನಡೆಯಲಿದ್ದು, ಈ ನಾಲ್ಕೂ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಒಂದು ತಂಡಕ್ಕೆ 4 ನಗರಗಳಲ್ಲಿ ಪಂದ್ಯ

ಯಾವ ತಂಡಕ್ಕೂ ತನ್ನ ತವರಿನಲ್ಲಿ ಪಂದ್ಯಗಳಿಲ್ಲ. ಅಂದರೆ ಆರ್‌ಸಿಬಿ ಪಂದ್ಯಗಳು ಬೆಂಗಳೂರಲ್ಲಿ ನಡೆಯುವುದಿಲ್ಲ. ಬದಲಾಗಿ ಕೊಹ್ಲಿ ಪಡೆ ಚೆನ್ನೈ, ಮುಂಬೈ, ಅಹಮದಾಬಾದ್‌ ಹಾಗೂ ಕೋಲ್ಕತಾದಲ್ಲಿ ತನ್ನ ಪಂದ್ಯಗಳು ಆಡಲಿದೆ. ಲೀಗ್‌ ಹಂತದಲ್ಲಿ ಚೆನ್ನೈ, ಬೆಂಗಳೂರು, ಕೋಲ್ಕತಾ ಹಾಗೂ ಮುಂಬೈ ತಲಾ 10 ಪಂದ್ಯಗಳಿಗೆ ವೇದಿಕೆಯಾಗಲಿವೆ. 

ದೆಹಲಿ ಹಾಗೂ ಅಹಮದಾಬಾದ್‌ ತಲಾ 8 ಪಂದ್ಯಗಳನ್ನು ಆಯೋಜಿಸಲಿವೆ. ಪ್ಲೇ-ಆಫ್‌ನ 4 ಪಂದ್ಯಗಳು ಸೇರಿ ಅಹಮದಾಬಾದ್‌ನಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಮೊಟೇರಾ ಕ್ರೀಡಾಂಗಣ ಐಪಿಎಲ್‌ಗೆ ಆತಿಥ್ಯಗೆ ನೀಡಲಿದೆ.