ರಾಜಸ್ಥಾನ ರಾಯಲ್ಸ್ ಆಲ್ರೌಂಡರ್ ಆಟಕ್ಕೆ ಕೆಕೆಆರ್ ಶರಣಾಗಿದೆ. ಮಾರ್ಗನ್ ಸೈನ್ಯ ಮಣಿಸಿದ ರಾಜಸ್ಥಾನ ರಾಯಲ್ಸ್ ಇದೀಗ ಅಂಕಪಟ್ಟಿಯ ಅಂತಿಮ ಸ್ಥಾನದಿಂದ ಮೇಲಕ್ಕೇರಿದೆ. ರಾಜಸ್ಥಾನ ಹಾಗೂ ಕೆಕೆಆರ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಮುಂಬೈ(ಏ.24): ಸತತ ಸೋಲಿನಿಂದ ಕಂಗೆಟ್ಟಿದ ರಾಜಸ್ಥಾನ ರಾಯಲ್ಸ್ ಇದೀಗ ಅಂಕಪಟ್ಟಿಯ ಕೊನೆಯ ಸ್ಥಾನದಿಂದ 6 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕೆಕೆಆರ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಪಡೆ 6 ವಿಕೆಟ್ ಗೆಲುವು ದಾಖಲಿಸಿದೆ.
ಗೆಲುವಿಗೆ 134 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತು. ಆದರೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಟದಿಂದ ರಾಜಸ್ಥಾನ ಚೇತರಿಸಿಕೊಂಡಿತು. ಜೈಸ್ವಾಲ್ 22 ರನ್ ಸಿಡಿಸಿ ಔಟಾದರು.
ಶಿವಂ ದುಬೆ ಜೊತೆ ಸೇರಿ ಇನ್ನಿಂಗ್ಸ್ ಮುಂದುವರಿಸಿದ ಸ್ಯಾಮ್ಸನ್ ರಾಜಸ್ಥಾನ ಗೆಲುವಿನ ಹಾದಿ ಸುಗಮಗೊಳಿಸುವ ಪ್ರಯತ್ನ ಮಾಡಿದರು. ಆದರೆ ಶಿವಂ ದುಬೆ 22 ರನ್ ಸಿಡಿಸಿ ಔಟಾದರು. ರಾಹುಲ್ ಟಿವಾಟಿಯಾ ಕೇವಲ 2 ರನ್ ಸಿಡಿಸಿ ಔಟಾದರು.
ಡೇವಿಡ್ ಮಿಲ್ಲರ್ ಜೊತೆ ಸೇರಿದ ಸಂಜು ಸ್ಯಾಮ್ಸನ್, ಕೆಕೆಆರ್ ಕೊನೆಯ ಆಸೆಗೆ ತಣ್ಣೀರೆರಚಿದರು. ಸ್ಯಾಮ್ಸನ್ ಅಜೇಯ 42 ರನ್ ಸಿಡಿಸಿದರೆ, ಮಿಲ್ಲರ್ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದಕೊಂಡು ಗೆಲುವು ಸಾಧಿಸಿತು.
