IPL 2021: ಪಂಜಾಬ್ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ
* ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಎದುರು ವಿರಾಟ್ ಕೊಹ್ಲಿ ಪಡೆಗೆ 6 ರನ್‌ಗಳ ರೋಚಕ ಗೆಲುವು
* ಚೆನ್ನೈ, ಡೆಲ್ಲಿ ಬಳಿಕ ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ
ಶಾರ್ಜಾ(ಅ.03): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ 48ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು 6 ರನ್‌ಗಳಿಂದ ಮಣಿಸಿದ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಮೂರನೇ ತಂಡವೆನಿಸಿತು. ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ಅರ್ಧಶತಕ ವ್ಯರ್ಥವಾಯಿತು. ಪಂಜಾಬ್ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಉಳಿದ ತಂಡಗಳ ಫಲಿತಾಂಶಗಳ ಮೇಲೆ ಪಂಜಾಬ್ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ.
ಆರ್‌ಸಿಬಿ ನೀಡಿದ್ದ 165 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಪಂಜಾಬ್ ಪರ ಮೊದಲ ವಿಕೆಟ್‌ಗೆ ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಕೆ.ಎಲ್. ರಾಹುಲ್ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿತ್ತು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ನಾಯಕ ಕೆ.ಎಲ್ ರಾಹುಲ್ 35 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿ ಶಹಬಾಜ್ ಅಹಮದ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಿಕೋಲಸ್ ಪೂರನ್ ಕೇವಲ 3 ರನ್ ಬಾರಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಆಗ ಪಂಜಾಬ್ 13 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 99 ರನ್ ಬಾರಿಸಿತ್ತು.
ಮಯಾಂಕ್ ಭರ್ಜರಿ ಬ್ಯಾಟಿಂಗ್: ಒಂದು ಕಡೆ ರಾಹುಲ್ ಹಾಗೂ ಪೂರನ್ ವಿಕೆಟ್ ಪತನವಾದರೂ, ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 36 ಎಸೆತಗಳಲ್ಲಿ ಮಯಾಂಕ್ ಆಕರ್ಷಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಮಯಾಂಕ್ ಅಗರ್‌ವಾಲ್ 42 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿ ಯುಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸರ್ಫರಾಜ್ ಖಾನ್ ಶೂನ್ಯ ಸುತ್ತಿ ಚಹಲ್‌ಗೆ ಮೂರನೇ ಬಲಿಯಾದರು.
ಕೊನೆಯ 4 ಓವರ್‌ಗಳಲ್ಲಿ ಪಂಜಾಬ್‌ಗೆ ಗೆಲ್ಲಲು 44 ರನ್‌ಗಳ ಅಗತ್ಯವಿತ್ತು. 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 20 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಏಯ್ಡನ್ ಮಾರ್ಕ್‌ರಮ್(20) ಅವರನ್ನು ಜಾರ್ಜ್ ಗಾರ್ಟನ್ ಪೆವಿಲಿಯನ್ನಿಗಟ್ಟಿ ಪಂದ್ಯಕ್ಕೆ ತಿರುವು ನೀಡಿದರು. ಇನ್ನು ಕಳೆದ ಪಂದ್ಯದ ಗೆಲುವಿನ ಹೀರೋ ಶಾರುಕ್ ಖಾನ್ 11 ಎಸೆತಗಳಲ್ಲಿ 16 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ರನೌಟ್ ಆದರು.
ಕೊನೆಯ ಓವರ್‌ನಲ್ಲಿ ಪಂಜಾಬ್ ಗೆಲ್ಲಲು 19 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಜವಾಬ್ದಾರಿ ಹೊತ್ತ ಹರ್ಷಲ್ ಪಟೇಲ್ ಮೊದಲ ಎಸೆತದಲ್ಲೇ ಶಾರುಕ್ ಖಾನ್ ರನೌಟ್ ಮಾಡಿದರು. ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಕೇವಲ 12 ರನ್ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನೇ ಪಡೆಯಿತು. ಇನಿಂಗ್ಸ್ ಮಧ್ಯದಲ್ಲಿ ಹೆನ್ರಿಕೇಸ್ 3 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಾಯಕ ವಿರಾಟ್ ಕೊಹ್ಲಿ(25) ಪಡಿಕ್ಕಲ್(40) ಕ್ರಿಶ್ಚಿಯನ್(0) ಬಲಿ ಪಡೆಯುವಲ್ಲಿ ಹೆನ್ರಿಕೇಸ್ ಯಶಸ್ವಿಯಾದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು. ಮ್ಯಾಕ್ಸ್‌ವೆಲ್‌ಗೆ ಉತ್ತಮ ಸಾಥ್ ನೀಡಿದ ಎಬಿ ಡಿವಿಲಿಯರ್ಸ್ 23 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 164/7
ಗ್ಲೆನ್ ಮ್ಯಾಕ್ಸ್‌ವೆಲ್: 57
ಮೊಯಿಸ್ ಹೆನ್ರಿಕೇಸ್: 12/3
ಪಂಜಾಬ್ ಕಿಂಗ್ಸ್: 158/6
ಮಯಾಂಕ್ ಅಗರ್‌ವಾಲ್: 57
ಚಹಲ್ 29/3