Asianet Suvarna News Asianet Suvarna News

IPL 2021: ಜಡೇಜಾ ಹೀರೋ, ಕೆಕೆಆರ್ ಎದುರು ರೋಚಕ ಜಯ ಸಾಧಿಸಿದ ಸಿಎಸ್‌ಕೆ..!

* ಕೆಕೆಆರ್ ಎದುರು ರೋಚಕ ಗೆಲುವು ಸಾಧಿಸಿದ ಸಿಎಸ್‌ಕೆ

* ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿದ ಚೆನ್ನೈ ಸೂಪರ್ ಕಿಂಗ್ಸ್‌

* ಒಂದೇ ಓವರ್‌ನಲ್ಲಿ 21 ರನ್‌ ಚಚ್ಚಿ ಪಂದ್ಯದ ದಿಕ್ಕೇ ಬದಲಿಸಿದ ಜಡೇಜಾ

IPL 2021 Ravindra Jadeja Super Batting Helps CSK beat KKR by 2  Wicket in Abu Dhabi kvn
Author
Abu Dhabi - United Arab Emirates, First Published Sep 26, 2021, 7:40 PM IST

ಅಬುಧಾಬಿ(ಸೆ.26): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ರವೀಂದ್ರ ಜಡೇಜಾ(Ravidra Jadeja) ಕೊನೆಯಲ್ಲಿ ಅಮೋಘ ಬ್ಯಾಟಿಂಗ್ ನಡೆಸುವ ಮೂಲಕ ಕೆಕೆಆರ್(KKR) ವಿರುದ್ದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು. ಕೇವಲ 6 ಎಸೆತಗಳಲ್ಲಿ 22 ರನ್‌ ಚಚ್ಚಿ ಜಡೇಜಾ ಸಿಎಸ್‌ಕೆ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕೋಲ್ಕತ ನೈಟ್ ರೈಡರ್ಸ್‌(Kolkata Knight Riders) ನೀಡಿದ್ದ 172 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಾಫ್ ಡುಪ್ಲೆಸಿಸ್‌ ಹಾಗೂ ಋತುರಾಜ್ ಗಾಯಕ್ವಾಡ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 74 ರನ್‌ಗಳ ಜತೆಯಾಟವಾಡುವ ಮೂಲಕ ಸಿಎಸ್‌ಕೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಗಾಯಕ್ವಾಡ್‌ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 40 ರನ್‌ ಬಾರಿಸಿ ರಸೆಲ್‌ಗೆ ವಿಕೆಟ್‌ ಒಪ್ಪಿಸಿದರು. ಇದಾಗಿ ಕೆಲ ಹೊತ್ತಿನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಡು ಪ್ಲೆಸಿಸ್‌ 30  ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 43 ರನ್‌ ಬಾರಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್‌ ಒಪ್ಪಿಸಿದರು.  

ಇನ್ನು ಉತ್ತಮ ಬ್ಯಾಟಿಂಗ್ ಮಾಡುವ ಮುನ್ಸೂಚನೆ ತೋರಿದ ಅಂಬಟಿ ರಾಯುಡು 10 ರನ್‌ ಬಾರಿಸಿ ಸುನಿಲ್ ನರೈನ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಇದಾದ ಬಳಿಕ ಮೋಯಿನ್‌ ಅಲಿ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಸ್ಪೋಟಕ 32 ರನ್‌ ಬಾರಿಸಿದರಾದರೂ ಕೊನೆಯ ಕ್ಷಣದಲ್ಲಿ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಲಾಕಿ ಫರ್ಗ್ಯೂಸನ್‌ ಬೌಲಿಂಗ್‌ನಲ್ಲಿ ವೆಂಕಟೇಶ್ ಐಯ್ಯರ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಈ ವೇಳೆ ಸಿಎಸ್‌ಕೆ ಗೆಲ್ಲಲು 20 ಎಸೆತಗಳಲ್ಲಿ 34 ರನ್‌ಗಳ ಅಗತ್ಯವಿತ್ತು.

IPL 2021: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ KKR

18ನೇ ಓವರ್‌ನಲ್ಲಿ ಇಲ್ಲದ ರನ್‌ ಕದಿಯಲು ಹೋಗಿ ಸುರೇಶ್‌ ರೈನಾ(Suresh Raina) ರನೌಟ್‌ ಆಗುವ ಮೂಲಕ ಪೆವಿಲಿಯನ್ ಸೇರಿದರು. ಈ ವೇಳೆ ಚೆನ್ನೈ ಪಾಳಯದಲ್ಲಿ ಆತಂಕ ಮನೆ ಮಾಡಿತು. ಇದರ ಬೆನ್ನಲ್ಲೇ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni)ಯನ್ನು ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾದರು. ಕೊನೆಯ 2 ಓವರ್‌ನಲ್ಲಿ ಸಿಎಸ್‌ಕೆ ಗೆಲ್ಲಲು 26 ರನ್‌ಗಳ ಅಗತ್ಯವಿತ್ತು.  19ನೇ ಓವರ್‌ ಜವಾಬ್ದಾರಿ ಹೊತ್ತ ಪ್ರಸಿದ್ದ್ ಕೃಷ್ಣ ಮೊದಲೆರಡು ಎಸೆತಗಳಲ್ಲಿ ಕೇವಲ 2 ರನ್‌ ನೀಡಿದರು. ಇದಾದ ಬಳಿಕ ರವೀಂದ್ರ ಜಡೇಜಾ ಸತತ ಸಿಕ್ಸರ್‌ ಹಾಗೂ ಎರಡು ಬೌಂಡರಿ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. 19ನೇ ಓವರ್‌ನಲ್ಲಿ ಪ್ರಸಿದ್ಧ್ 22 ರನ್‌ ನೀಡಿದರು. 

ರೋಚಕತೆ ಹೆಚ್ಚಿಸಿದ ಕೊನೆಯ ಓವರ್‌: ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲ್ಲಲು ಕೇವಲ 4 ರನ್‌ಗಳ ಅಗತ್ಯವಿತ್ತು. ಸುನಿಲ್‌ ನರೈನ್‌ ಮೊದಲ ಎಸೆತದಲ್ಲೇ ಸ್ಯಾಮ್ ಕರ್ರನ್ ವಿಕೆಟ್ ಕಬಳಿಸಿದರು. ಇದಾದ ಬಳಿಕ ಎರಡನೇ ಎಸೆತವನ್ನು ಚುಕ್ಕೆ ಎಸೆತ ಹಾಕುವ ಮೂಲಕ ರೋಚಕತೆ ಮತ್ತಷ್ಟು ಹೆಚ್ಚಿಸಿದರು. ಇನ್ನು ಮೂರನೆ ಎಸೆತದಲ್ಲಿ ದೀಪಕ್ ಚಹಾರ್ 3 ರನ್‌ ಗಳಿಸಿ ರನ್‌ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ 4ನೇ ಎಸೆತದಲ್ಲಿ ಯಾವುದೇ ರನ್‌ ನೀಡದ ನರೈನ್, ಐದನೇ ಎಸೆತದಲ್ಲಿ ಜಡೇಜಾ ಬಲಿ ಪಡೆದರು. ಹೀಗಾಗಿ ಕೊನೆಯ ಎಸೆತದಲ್ಲಿ ದೀಪಕ್ ಚಹಾರ್ ಒಂದು ಗಳಿಸಿ ಸಿಎಸ್‌ಕೆ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಆರಂಭಿಕ ಆಘಾತದ ಹೊರತಾಗಿಯೂ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್‌ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 171 ರನ್‌ ಕಲೆಹಾಕಿತ್ತು.

Follow Us:
Download App:
  • android
  • ios