* ಪಂಜಾಬ್ ಕಿಂಗ್ಸ್ ತಂಡಕ್ಕಿಂದು ಕೆಕೆಆರ್ ಸವಾಲು* ಕೆ.ಎಲ್. ರಾಹುಲ್ ಪಡೆಗಿಂದ ಮಾಡು ಇಲ್ಲವೇ ಮಡಿ ಪಂದ್ಯ* ಇಂದಿನ ಪಂದ್ಯ ಸೋತರೇ ಬಹುತೇಕ ಪಂಜಾಬ್ ಪ್ಲೇ ಆಫ್ ಕನಸು ಭಗ್ನ
ದುಬೈ(ಅ.01): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಸುಲಭವಾಗಿ ಗೆಲ್ಲುವ ಪಂದ್ಯಗಳನ್ನೂ ಯಾರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಸೋತು ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಆತಂಕಕ್ಕೆ ಸಿಲುಕಿರುವ ಪಂಜಾಬ್ ಕಿಂಗ್ಸ್ (Punjab Kings), ಶುಕ್ರವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲಿದೆ.
ಆಡಿರುವ 11 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಕೇವಲ 8 ಅಂಕ ಸಂಪಾದಿಸಿರುವ ಪಂಜಾಬ್ ಇನ್ನು ಬಾಕಿ ಇರುವ 3 ಪಂದ್ಯಗಳಲ್ಲಿ ಗೆದ್ದರೆ ಗರಿಷ್ಠ 14 ಅಂಕಗಳನ್ನು ತಲುಪಬಹುದು. ಈಗಾಗಲೇ ಅಗ್ರ 3 ಸ್ಥಾನಗಳಲ್ಲಿರುವ ತಂಡಗಳು 14 ಅಥವಾ ಅದಕ್ಕಿಂತ ಹೆಚ್ಚು ಅಂಕ ಹೊಂದಿವೆ. ಅಲ್ಲದೇ ಆ ತಂಡಗಳಿಗೆ ಇನ್ನೂ ತಲಾ 3 ಪಂದ್ಯಗಳು ಬಾಕಿ ಇವೆ.
IIPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್ ಗೇಲ್..!
ಹೀಗಿರುವಾಗ ಪಂಜಾಬ್ 4ನೇ ಸ್ಥಾನ ಗಳಿಸಬೇಕೆಂದರೆ ಮೂರು ಪಂದ್ಯಗಳನ್ನು ಗೆಲ್ಲುವುದಷ್ಟೇ ಅಲ್ಲ, ಉತ್ತಮ ನೆಟ್ ರನ್‌ರೇಟ್ ಸಹ ಸಂಪಾದಿಸಬೇಕಿದೆ. ಕೆ ಎಲ್ ರಾಹುಲ್ (KL Rahul) ಪಡೆ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ರೇಸ್‌ನಿಂದ ಹೆಚ್ಚೂ ಕಡಿಮೆ ಹೊರಬಿದ್ದಂತೆಯೇ ಲೆಕ್ಕ. ಮತ್ತೊಂದೆಡೆ 11 ಪಂದ್ಯಗಳಲ್ಲಿ 10 ಅಂಕ ಗಳಿಸಿರುವ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ತಂಡವು ಉತ್ತಮ ನೆಟ್ ರನ್‌ರೇಟ್ ಹೊಂದಿದೆ. ಹೀಗಾಗಿ ತಂಡ ಬಾಕಿ ಇರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೂ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಿರಲಿದೆ. ಆದರೂ ತಂಡ ಮೂರೂ ಪಂದ್ಯಗಳಲ್ಲಿ ಗೆಲ್ಲುವ ಗುರಿ ಹೊಂದಿದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೋಲ್ಕತ ನೈಟ್ ರೈಡರ್ಸ್ ಸ್ಪಷ್ಟ ಮೇಲುಗೈ ಸಾಧಿಸಿರುವುದು ಗೋಚರವಾಗಿದೆ. ಹೌದು, 28 ಪಂದ್ಯಗಳ ಪೈಕಿ ಕೆಕೆಆರ್ ತಂಡವು 19 ಬಾರಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು ಕೇವಲ 9 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ.
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಶುಭ್‌ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್(ನಾಯಕ), ದಿನೇರ್ಶ ಕಾರ್ತಿಕ್, ರಸೆಲ್/ಸೌಥಿ, ಸುಬಿಲ್ ನರೇನ್, ಲಾಕಿ ಫಗ್ರ್ಯೂಸನ್, ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್.
ಪಂಜಾಬ್ ಕಿಂಗ್ಸ್: ಕೆ.ಎಲ್ ರಾಹುಲ್, ಮನ್‌ದೀಪ್/ಮಯಾಂಕ್, ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಪ್ಯಾಬಿಯನ್ ಅಲೆನ್, ಹಪ್ರೀತ್ ಬ್ರಾರ್, ಎಲ್ಲೀಸ್, ಅಶ್‌ರ್‍ದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ.
ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
