* ಮುಂಬೈ ಇಂಡಿಯನ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭ* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ* ಸಾಂಪ್ರದಾಯಿಕ ಎದುರಾಳಿಗಳ ಫೈಟ್‌ನತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ
ಚೆನ್ನೈ(ಸೆ.19): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಂದ ಯುಎಇ ಚರಣದ ಮೊದಲ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 30ನೇ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಭಾರತದಲ್ಲಿ ನಡೆದ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಸಾಕಷ್ಟು ಹೈ ಸ್ಕೋರಿಂಗ್‌ನಿಂದ ಕೂಡಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತ್ತು. ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಂಬಟಿ ರಾಯುಡು ಬಾರಿಸಿದ ಸ್ಪೋಟಕ ಅರ್ಧಶತಕ(72 ರನ್ 27 ಎಸೆತ)ದ ನೆರವಿನಿಂದ 218 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಮುಂಬೈ ಪೊಲ್ಲಾರ್ಡ್ ಅಜೇಯ ಅರ್ಧಶತಕದ ನೆರವಿನಿಂದ ಗೆಲುವಿನ ನಗೆ ಬೀರಿತ್ತು.
IPL 2021 ಮುಂಬೈ vs ಚೆನ್ನೈ ಬ್ಲಾಕ್‌ಬಸ್ಟರ್ ಪಂದ್ಯಕ್ಕೆ ಕ್ಷಣಗಣನೆ!
ಸದ್ಯ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡವು 7 ಪಂದ್ಯಗಳಲ್ಲಿ 4 ಗೆಲುವು ಹಾಗೂ 3 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ಮತ್ತೊಮ್ಮೆ ಎರಡು ಚಾಂಪಿಯನ್ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಉಭಯ ತಂಡಗಳಲ್ಲಿ ಯಾರೆಲ್ಲಾ ಆಟಗಾರರು ಸ್ಥಾನ ಪಡೆಯಬಹುದು ಎನ್ನುವ ಕುತೂಹಲ ಜೋರಾಗಿದೆ.
ಚೆನ್ನೈ ತಂಡ ಹೇಗಿರಲಿದೆ?
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲ ಪಂದ್ಯದಲ್ಲಿ ಸ್ಯಾಮ್ ಕರ್ರನ್ ಸೇವೆ ಲಭ್ಯವಿರುವುದಿಲ್ಲ. ಕರ್ರನ್ ಇನ್ನೂ ಕ್ವಾರಂಟೈನ್ ಅವಧಿ ಮುಗಿಸಿಲ್ಲ. ಹೀಗಾಗಿ ಆಲ್ರೌಂಡರ್ ರೂಪದಲ್ಲಿ ಡ್ವೇನ್ ಬ್ರಾವೋ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನುಳಿದಂತೆ ಫಾಫ್ ಡುಪ್ಲೆಸಿಸ್, ಮೋಯಿನ್ ಅಲಿ ಹಾಗೂ ಇಮ್ರಾನ್ ತಾಹಿರ್ ವಿದೇಶಿ ಆಟಗಾರರ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾದಲ್ಲಿ ಗಾಯಕ್ವಾಡ್ ಜತೆ ಡು ಪ್ಲೆಸಿಸ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಹೇಗಿರಲಿದೆ?
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತನ್ನ ಕೋರ್ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಡಿ ಕಾಕ್ ಉತ್ತಮ ಫಾರ್ಮ್‌ನಲ್ಲಿದ್ದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಇಶಾನ್ ಕಿಶನ್, ಸೂರ್ಯಕುಮಾರ್, ಪಾಂಡ್ಯ ಬ್ರದರ್ಸ್, ಪೊಲ್ಲಾರ್ಡ್ ಬಹುತೇಕ ತಂಡದಲ್ಲಿರಲಿದ್ದಾರೆ. ಬೌಲಿಂಗ್‌ನಲ್ಲಿ ಬೌಲ್ಟ್, ನೇಥನ್ ಕೌಲ್ಟರ್‌ನೈಲ್, ಬುಮ್ರಾ ಹಾಗೂ ರಾಹುಲ್ ಚಹಾರ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ.
ಸಂಭಾವ್ಯ ತಂಡ:
ಚೆನ್ನೈ: ಋುತುತಾಜ್, ಡು ಪ್ಲೆಸಿ, ಮೋಯಿನ್, ರೈನಾ, ರಾಯುಡು, ಧೋನಿ(ನಾಯಕ), ಜಡೇಜಾ, ಶಾರ್ದೂಲ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಎನ್‌ಗಿಡಿ/ತಾಹಿರ್.
ಮುಂಬೈ: ಡಿ ಕಾಕ್, ರೋಹಿತ್(ನಾಯಕ), ಸೂರ್ಯಕುಮಾರ್, ಕಿಶನ್, ಪೊಲ್ಲಾರ್ಡ್, ಕೃನಾಲ್, ಹಾರ್ದಿಕ್, ಕೌಲ್ಟರ್-ನೈಲ್, ರಾಹುಲ್ ಚಹರ್, ಬೌಲ್ಟ್, ಬುಮ್ರಾ.
