* ಯುಎಇ ಚರಣದ ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭ* ಮೊದಲ ಪಂದ್ಯದಲ್ಲೇ ಮುಂಬೈ-ಚೆನ್ನೈ ತಂಡಗಳು ಮುಖಾಮುಖಿ* ದುಬೈನಲ್ಲಿ ನಡೆಯಲಿದೆ ಹೈ ವೋಲ್ಟೇಜ್‌ ಪಂದ್ಯ

ದುಬೈ(ಸೆ.19): ಐಪಿಎಲ್‌ನ ಹಳೆ ವೈರಿಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಭಾನುವಾರ 14ನೇ ಆವೃತ್ತಿಯ ಭಾಗ-2ಕ್ಕೆ ಭರ್ಜರಿ ಆರಂಭ ನೀಡಲಿವೆ. ಈ ಎರಡು ಬಲಿಷ್ಠ ತಂಡಗಳ ನಡುವಿನ ಸೆಣಸಾಟ ಕ್ರಿಕೆಟ್‌ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದೆ.

ಭಾಗ ಒಂದರಲ್ಲೇ ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿತ್ತು. ಆ ಪೈಪೋಟಿ ಈಗ ಮತ್ತಷ್ಟು ಜಾಸ್ತಿಯಾಗಲಿದೆ. ಚೆನ್ನೈ ಹಾಗೂ ಮುಂಬೈ ಎರಡೂ ತಂಡಗಳು ಅಂತಿಮ 4ರಲ್ಲಿ ಸ್ಥಾನ ಪಡೆಯುವ ನೆಚ್ಚಿನ ತಂಡಗಳು ಎನಿಸಿದ್ದು, ಪ್ರತಿ ಪಂದ್ಯವೂ ಮುಖ್ಯವೆನಿಸಲಿದೆ.

Scroll to load tweet…

ರೋಹಿತ್‌ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್‌ ಮುಂಬೈ, 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಎಂ.ಎಸ್‌.ಧೋನಿ ನೇತೃತ್ವದ ಚೆನ್ನೈ, 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 2ನೇ ಸ್ಥಾನ ಪಡೆದಿದೆ. ಚೆನ್ನೈ ತಂಡ ಈ ಪಂದ್ಯದಲ್ಲಿ ಜಯಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

IPL 2021: ಸಿಕ್ಸರ್ ದಾಖಲೆ ಬರೆಯಲು ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್!

2020ರಲ್ಲಿ ನಿರಾಸೆ ಅನುಭವಿಸಿದ್ದ ಚೆನ್ನೈ ಈ ಬಾರಿ ತಮ್ಮ ಉತ್ತಮ ತಂಡ ಸಂಯೋಜನೆ ಹೊಂದಿದೆ. ಋುತುರಾಜ್‌, ಸ್ಯಾಮ್‌ ಕರ್ರನ್‌ ಭಾಗ ಒಂದರಲ್ಲಿ ಉತ್ತಮ ಆಟವಾಡಿದ್ದರು. ತಂಡದ ಸ್ಪಿನ್ನರ್‌ಗಳಾದ ಇಮ್ರಾನ್‌ ತಾಹಿರ್‌, ಮೋಯಿನ್‌ ಅಲಿ, ರವೀಂದ್ರ ಜಡೇಜಾ ಸಹ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಅಲಿ ಹಾಗೂ ಜಡೇಜಾ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಇದೀಗ ತಾರಾ ಆಟಗಾರರಾದ ಧೋನಿ ಹಾಗೂ ಸುರೇಶ್‌ ರೈನಾ ಸಹ ಬ್ಯಾಟಿಂಗ್‌ನಲ್ಲಿ ಮಿಂಚಬೇಕಿದೆ.

ಮತ್ತೊಂದೆಡೆ ಮುಂಬೈ ಪ್ರತಿ ಬಾರಿಯೂ ಒತ್ತಡದ ಸ್ಥಿತಿಯಲ್ಲಿ ಉತ್ತಮ ಆಟವಾಡಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಉಳಿದುಕೊಳ್ಳುವ ಒತ್ತಡದಲ್ಲಿರುವ ಮುಂಬೈ, ತನ್ನೆಲ್ಲಾ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಲು ಎದುರು ನೋಡುತ್ತಿದೆ. ತಂಡದ ಸದೃಢ ಬ್ಯಾಟಿಂಗ್‌ ಪಡೆಯ ಮೇಲೆ ಹೆಚ್ಚು ವಿಶ್ವಾಸವಿರಿಸಿರುವ ಮುಂಬೈ, ಪವರ್‌-ಪ್ಲೇ ಬೌಲಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ.

ಉಭಯ ತಂಡಗಳು ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ, ಮುಂಬೈ 4 ವಿಕೆಟ್‌ಗಳಿಂದ ಗೆದ್ದಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಚೆನ್ನೈ ಕಾಯುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋುತುತಾಜ್‌, ಡು ಪ್ಲೆಸಿ, ಮೋಯಿನ್‌, ರೈನಾ, ರಾಯುಡು, ಧೋನಿ(ನಾಯಕ), ಜಡೇಜಾ, ಶಾರ್ದೂಲ್‌, ದೀಪಕ್‌ ಚಹರ್‌, ಎನ್‌ಗಿಡಿ/ತಾಹಿರ್‌, ಹೇಜಲ್‌ವುಡ್‌.

ಮುಂಬೈ: ಡಿ ಕಾಕ್‌, ರೋಹಿತ್‌(ನಾಯಕ), ಸೂರ್ಯಕುಮಾರ್‌, ಕಿಶನ್‌, ಪೊಲ್ಲಾರ್ಡ್‌, ಕೃನಾಲ್‌, ಹಾರ್ದಿಕ್‌, ಕೌಲ್ಟರ್‌-ನೈಲ್‌, ರಾಹುಲ್‌ ಚಹರ್‌, ಬೌಲ್ಟ್‌, ಬೂಮ್ರಾ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಭಾರತೀಯ ವಾತಾವರಣಕ್ಕಿಂದ ವಿಭಿನ್ನವಾಗಿರಲಿದೆ. ಪಿಚ್‌ ನಿಧಾನಗತಿಯಲ್ಲಿರಲಿದ್ದು, ಬೌಂಡರಿಗಳು ದೊಡ್ಡದಿರಲಿವೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಮಾಡುವುದು ಸೂಕ್ತ ಎನ್ನಲಾಗಿದೆ. ಚೆನ್ನೈ ತಂಡಕ್ಕೆ ಹೆಚ್ಚು ಲಾಭವಾಗುವ ನಿರೀಕ್ಷೆ ಇದೆ.

ಟಿ20 ವಿಶ್ವಕಪ್‌ಗೂ ಮುನ್ನ ಆಟಗಾರರಿಗೆ ಅಭ್ಯಾಸ!

ಐಪಿಎಲ್‌ ಮುಗಿಯುತ್ತಿದ್ದಂತೆ ಯುಎಇನಲ್ಲೇ ಟಿ20 ವಿಶ್ವಕಪ್‌ ಸಹ ನಡೆಯಲಿದೆ. ಟಿ20 ವಿಶ್ವಕಪ್‌ ತಂಡದಲ್ಲಿರುವ ಭಾರತದ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಹೀಗಾಗಿ ಕ್ರೀಡಾಂಗಣಗಳ ಬಗ್ಗೆ, ಪಿಚ್‌ಗಳ ವರ್ತನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ನೆರವಾಗಲಿದೆ. ಜೊತೆಗೆ ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಅನುಕೂಲವಾಗಲಿದೆ. ಬೇರೆ ಬೇರೆ ತಂಡಗಳ ಪ್ರಮುಖ ಆಟಗಾರರು ಸಹ ಐಪಿಎಲ್‌ನಲ್ಲಿ ಆಡುವ ಕಾರಣ ಆ ತಂಡಗಳಿಗೂ ಮಾಹಿತಿ ಕಲೆಹಾಕಲು ಐಪಿಎಲ್‌ ಸಹಕಾರಿಯಾಗಲಿದೆ.