ಚೆನ್ನೈ(ಏ.23): ಜಯದ ಆರಂಭ ಪಡೆದ ಬಳಿಕ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೆ ಒಳಗಾಗಿರುವ ಪಂಜಾಬ್‌ ಕಿಂಗ್ಸ್‌ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಘಾತಕಾರಿ ಸೋಲುಂಡ ಮುಂಬೈ ಪುಟಿದೇಳುವ ವಿಶ್ವಾಸದಲ್ಲಿದೆ. ಜಯಕ್ಕಾಗಿ ಹಾತೊರೆಯುತ್ತಿರುವ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಶುಕ್ರವಾರ ಚೆಪಾಕ್‌ ಅಂಗಳದಲ್ಲಿ ಮುಖಾಮುಖಿ ಆಗಲಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯದೆ ಎಂದು ಕಾದು ನೋಡಬೇಕಿದೆ.

ಈ ಸಾಲಿನ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಹದಗೆಡುತ್ತಿದ್ದು, ಜಯಕ್ಕಾಗಿ ತಿಣುಕಾಟ ನಡೆಸುತ್ತಿದೆ. ಕೆ.ಎಲ್‌.ರಾಹುಲ್‌, ಕ್ರಿಸ್‌ ಗೇಲ್‌, ನಿಕೋಲಸ್‌ ಪೂರನ್‌, ಮಯಾಂಕ್‌ ಅಗರ್‌ವಾಲ್‌, ಹೆನ್ರಿಕ್‌ರಂತಹ ಶ್ರೇಷ್ಠ ಆಟಗಾರರಿದ್ದರೂ ತಂಡ ಜಯಕ್ಕಾಗಿ ಪರಿತಪಿಸುವ ಪರಿಸ್ಥಿತಿ ತಲುಪಿದೆ. ಯುನಿವರ್ಸಲ್‌ ಬಾಸ್‌ ಗೇಲ್‌ ಬ್ಯಾಟಿಂಗ್‌ನಿಂದ ನಿರೀಕ್ಷಿತ ರನ್‌ ಬರುತ್ತಿಲ್ಲ. ನಿಕೋಲಸ್‌ ಪೂರನ್‌ ಬ್ಯಾಟಿಂದ 4 ಪಂದ್ಯಗಳಿಂದ ಮೂಡಿಬಂದಿರುವುದು ಕೇವಲ 9 ರನ್‌. ಒಟ್ಟಾರೆ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸ್ಪಿನ್ನರ್‌ಗಳು ಅತ್ಯಂತ ದುಬಾರಿ ಆಗುತ್ತಿರುವ ಜತೆಗೆ, ವಿಕೆಟ್‌ ಪಡೆಯುವಲ್ಲಿ ಎಡುವುತ್ತಿರುವುದು ಭಾರೀ ದುಬಾರಿ ಆಗುತ್ತಿದೆ. ಒಟ್ಟಾರೆ, ಈ ಬಾರಿ ಪಂಜಾಬ್‌ನ ತಂಡ ಸಂಯೋಜನೆಯ ಅಸ್ತವ್ಯಸ್ತವಾಗಿದ್ದು, ಸೂಕ್ತ ತಂಡ ಆಯ್ಕೆ ಮಾಡುವಲ್ಲಿ ರಾಹುಲ್‌ ವಿಫಲರಾಗುತ್ತಿದ್ದಾರೆ.

IPL 2021: ಪಡಿಕ್ಕಲ್ ಸ್ಫೋಟಕ ಶತಕ, ರಾಯಲ್ಸ್ ವಿರುದ್ಧ ಚಾಲೆಂಜರ್ಸ್‌ಗೆ 10 ವಿಕೆಟ್‌ಗಳ ಜಯ

ಇನ್ನು ಪಂಜಾಬ್‌ಗೆ ಹೋಲಿಕೆ ಮಾಡಿದರೆ ಮುಂಬೈ ಇಂಡಿಯನ್ಸ್‌ ಪ್ರಬಲವಾಗಿದೆ. ಆದರೆ, ರೋಹಿತ್‌ ಶರ್ಮಾ ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಮಟ್ಟದ ರನ್‌ ಬಾರದ ಕಾರಣ ರೋಹಿತ್‌ ಮೇಲಿನ ಒತ್ತಡ ಹೆಚ್ಚಾಗಿದೆ. ಕಳೆದ ಬಾರಿ ಭರ್ಜರಿ ಆಟ ಪ್ರದರ್ಶಿಸಿದ್ದ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ರ ಬ್ಯಾಟಿಂದ ಈ ಬಾರಿ ಸಾಕಷ್ಟು ರನ್‌ ಹರಿದುಬಂದಿಲ್ಲ. ಪೊಲ್ಲಾರ್ಡ್‌, ಪಾಂಡ್ಯ ಸಹೋದರರ ವೈಫಲ್ಯ ಮುಂಬೈ ಇಂಡಿಯನ್ಸ್‌ನ ಮಧ್ಯಮ ಕ್ರಮಾಂಕಕ್ಕೆ ಭಾರೀ ಪೆಟ್ಟು ನೀಡಿದೆ. ಬೌಲ್ಟ್‌, ಬುಮ್ರಾ ಸೇರಿದಂತೆ ವೇಗಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಸ್ಪಿನ್ನರ್‌ಗಳಿಂದ ಹೆಚ್ಚಿನ ಬೆಂಬಲ ದೊರೆತರೆ ಜಯ ಸುಲಭವಾಗಲಿದೆ.

ಪಿಚ್‌ ರಿಪೋರ್ಟ್‌: ಚೆನ್ನೈ ಪಿಚ್‌ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳಿಗೆ ಹೆಚ್ಚು ಸ್ನೇಹಿಯಾಗಿದೆ. ಮೊದಲು ಬ್ಯಾಟ್‌ ಮಾಡಿದ ತಂಡ 180ಕ್ಕಿಂತ ಅಧಿಕ ರನ್‌ ಪೇರಿಸಿದರೆ ಗೆಲುವು ಸುಲಭವಾಗಲಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡವೇ ಹೆಚ್ಚು ಜಯ ಸಾಧಿಸಿದೆ.

ಸಂಭವನೀಯ ಆಟಗಾರರ ಪಟ್ಟಿ

ಕೆ.ಎಲ್‌.ರಾಹುಲ್‌(ನಾಯಕ), ಮಯಾಂಕ್‌, ಕ್ರಿಸ್‌ ಗೇಲ್‌/ಡೇವಿಡ್‌ ಮಲಾನ್‌, ದೀಪಕ್‌ ಹೂಡಾ, ನಿಕೋಲಸ್‌ ಪೂರನ್‌, ಶಾರುಖ್‌ ಖಾನ್‌, ಅಲೆನ್‌, ರಿಚರ್ಡ್‌ಸನ್‌, ಎಂ.ಅಶ್ವಿನ್‌, ಶಮಿ, ಆರ್ಷದೀಪ್‌ ಸಿಂಗ್‌

ರೋಹಿತ್‌ ಶರ್ಮಾ(ನಾಯಕ), ಡಿ ಕಾಕ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ರಾಹುಲ್‌ ಚಾಹರ್‌, ಜಯಂತ್‌ ಯಾದವ್‌, ಟ್ರೆಂಟ್‌ ಬೌಲ್ಟ್‌, ಬುಮ್ರಾ

ಸ್ಥಳ: ಚೆನ್ನೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್