ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ತಂಡವೊಂದನ್ನು ಮುನ್ನಡೆಸಿದ 5ನೇ ಕರ್ನಾಟಕದ ಕ್ರಿಕೆಟಿಗ ಎನ್ನುವ ಕೀರ್ತಿಗೆ ಮಯಾಂಕ್ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಮೇ.03): ಕೆ.ಎಲ್‌.ರಾಹುಲ್‌ ಅನಾರೋಗ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಿಂದ ಹೊರಗುಳಿದ ಕಾರಣ, ಭಾನುವಾರ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ ಮಯಾಂಕ್‌ ಅಗರ್‌ವಾಲ್‌, ಐಪಿಎಲ್‌ನಲ್ಲಿ ನಾಯಕನಾದ ಕರ್ನಾಟಕದ 5ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. 

ಈ ಮೊದಲು ರಾಹುಲ್‌ ದ್ರಾವಿಡ್‌ (ಆರ್‌ಸಿಬಿ, ರಾಜಸ್ಥಾನ), ಅನಿಲ್‌ ಕುಂಬ್ಳೆ (ಆರ್‌ಸಿಬಿ), ಕರುಣ್‌ ನಾಯರ್‌ (ಡೆಲ್ಲಿ) ಹಾಗೂ ಕೆ.ಎಲ್‌.ರಾಹುಲ್‌ (ಪಂಜಾಬ್‌) ಐಪಿಎಲ್‌ ತಂಡಗಳಿಗೆ ನಾಯಕರಾಗಿದ್ದರು. ನಾಯಕನಾಗಿ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್‌ ನಡೆಸಿದ ಮಯಾಂಕ್‌, ಅಜೇಯ 99 ಸಿಡಿಸಿದರು. 

ನಾಯಕ ಮಯಾಂಕ್ ಏಕಾಂಗಿ ಹೋರಾಟ; ಡೆಲ್ಲಿಗೆ 167 ರನ್ ಟಾರ್ಗೆಟ್!

ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ಬ್ಯಾಟಿಂಗ್ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡವು 7 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 6 ವಿಕೆಟ್ ಕಳೆದುಕೊಂಡು 166 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶಿಖರ್ ಧವನ್ ಆಕರ್ಷಕ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನ ನಗೆ ಬೀರಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.