ಚೆನ್ನೈ(ಏ.18): ಆರಂಭಿಕ ಆಘಾತದ ಹೊರತಾಗಿಯೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿವಿಲಿಯರ್ಸ್‌ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 4 ವಿಕೆಟ್ ಕಳೆದುಕೊಂಡು 204 ರನ್‌ ಬಾರಿಸಿದ್ದು, ಕೆಕೆಆರ್‌ಗೆ ಗೆಲ್ಲಲು ಕಠಿಣ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರ್‌ಸಿಬಿ ಎರಡಂಕಿ ಮೊತ್ತ ದಾಖಲಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಹಾಗೂ ರಜತ್‌ ಪಾಟೀದಾರ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಬಳಿಕ ಮೂರನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪಡಿಕ್ಕಲ್‌ 25 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. 

 ಆಕರ್ಷಕ ಬ್ಯಾಟಿಂಗ್‌ ನಡೆಸಿದ ಗ್ಲೆನ್‌ ಮ್ಯಾಕ್ಸ್‌ 49 ಎಸೆತಗಳಲ್ಲಿ 9  ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 78 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಮಿಸ್ಟರ್‌ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಜೇಯ 76 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.