ಕೋಲ್ಕತಾ(ಏ.02): 14ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಎದುರಾಗಿದ್ದ ಆತಂಕ ದೂರಾಗಿದೆ. ಕೋಲ್ಕತಾ ನೈಟ್‌ರೈಡರ್ಸ್ ತಂಡದ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ, ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯದಲ್ಲೇ ಅಭ್ಯಾಸ ಆರಂಭಿಸಲಿದ್ದಾರೆ. 

ಮಾರ್ಚ್ 21ಕ್ಕೆ ಕೋವಿಡ್‌ ನೆಗೆಟಿವ್‌ ವರದಿಯೊಂದಿಗೆ ಮುಂಬೈಗೆ ಆಗಮಿಸಿದ್ದ ರಾಣಾ ಕ್ವಾರಂಟೈನ್‌ನಲ್ಲಿದ್ದರು. ಮಾರ್ಚ್ 22ರಂದು ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಕಾರಣ ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ಡೆಲ್ಲಿ ಮೂಲದ ಆಟಗಾರನ ಮೇಲೆ ವೈದ್ಯರು ನಿಗಾ ವಹಿಸಿದ್ದರು. ಗುರುವಾರ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್‌ ಬಂದಿದೆ ಎಂದು ಕೆಕೆಆರ್‌ ತಂಡ ತಿಳಿಸಿದೆ.

IPL 2021: ಕೆಕೆಆರ್ ಸ್ಟಾರ್ ಆಟಗಾರನಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ.!

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ 14 ಪಂದ್ಯಗಳನ್ನಾಡಿ 25.14ರ ಸರಾಸರಿಯಲ್ಲಿ 352 ರನ್‌ ಬಾರಿಸಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಮೂಲದ ನಿತೀಶ್ ರಾಣಾ ಸ್ಥಿರ ಪ್ರದರ್ಶನ ತೋರಿದ್ದು, ಕಳೆದ 4 ಐಪಿಎಲ್‌ ಆವೃತ್ತಿಯಲ್ಲೂ ಸತತವಾಗಿ 300+ ರನ್‌ ಬಾರಿಸಿ ಗಮನ ಸೆಳೆದಿದ್ದಾರೆ. ಇದುವರೆಗೂ ಒಟ್ಟು 60 ಐಪಿಎಲ್‌ ಪಂದ್ಯಗಳನ್ನಾಡಿರುವ ರಾಣಾ 28.17ರ ಸರಾಸರಿಯಲ್ಲಿ 1,437 ರನ್‌ ಬಾರಿಸಿದ್ದಾರೆ.

ಏಪ್ರಿಲ್‌ 11ರಂದು ಇಯಾನ್‌ ಮಾರ್ಗನ್‌ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ತಂಡ, ಡೇವಿಡ್‌ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ತನ್ನ ಮೊದಲ ಪಂದ್ಯವನ್ನು ಆಡಲಿದೆ.