* ಡೆಲ್ಲಿ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸಿದ ಕೆಕೆಆರ್* ಕೆಕೆಆರ್ ತಂಡಕ್ಕೆ ಗೆಲ್ಲಲು ಸಾಧಾರಣ ಗುರಿ 

ಶಾರ್ಜಾ(ಸೆ.26): ಸುನಿಲ್‌ ನರೈನ್‌, ಲಾಕಿ ಫರ್ಗ್ಯೂಸನ್ ಹಾಗೂ ವೆಂಕಟೇಶ್ ಅಯ್ಯರ್ ಮಿಂಚಿನ ಬೌಲಿಂಗ್ ಪ್ರದರ್ಶನದ ನೆರವಿನಿಂದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸುವಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ಯಶಸ್ವಿಯಾಗಿದೆ.

ಟಾಸ್ ಗೆದ್ದ ಕೆಕೆಆರ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಪೃಥ್ವಿ ಶಾ ಬದಲಿಗೆ ತಂಡ ಕೂಡಿಕೊಂಡ ಸ್ಟೀವ್ ಸ್ಮಿತ್‌, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಜತೆ ಉತ್ತಮ ಆರಂಭ ಒದಗಿಸಿಕೊಡುವ ಮುನ್ಸೂಚನೆ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 5 ಓವರ್‌ಗಳಲ್ಲಿ 35 ರನ್‌ ಕಲೆಹಾಕಿತು. ಧವನ್ 20 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 24 ರನ್‌ ಬಾರಿಸಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಶ್ರೇಯಸ್‌ ಅಯ್ಯರ್ ಒಂದು ರನ್‌ ಬಾರಿಸಿ ನರೈನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಸ್ಟೀವ್ ಸ್ಮಿತ್ ಸಾಕಷ್ಟು ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಸ್ಮಿತ್ 34 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 39 ರನ್ ಬಾರಿಸಿ ಫರ್ಗ್ಯೂಸನ್‌ಗೆ ಎರಡನೇ ಬಲಿಯಾದರು.

Scroll to load tweet…

ಮಿಂಚಿದ ನರೈನ್‌-ವೆಂಕಟೇಶ್ ಅಯ್ಯರ್: ಬ್ಯಾಟಿಂಗ್‌ ಮೂಲಕ ಕಳೆದ ಕೆಲ ಪಂದ್ಯಗಳಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಬಲಿಷ್ಠ ಡೆಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸ್ಪೋಟಕ ಬ್ಯಾಟ್ಸ್‌ಮನ್ ಹೆಟ್ಮೇಯರ್(4) ಹಾಗೂ ಅಕ್ಷರ್ ಪಟೇಲ್‌(0) ಒಂದಂಕಿ ಮೊತ್ತಕ್ಕೆ ಬಲಿ ಪಡೆಯುವಲ್ಲಿ ವೆಂಕಟೇಶ್‌ ಅಯ್ಯರ್ ಯಶಸ್ವಿಯಾದರು. ಇನ್ನು ನರೇನ್ ಕೂಡಾ 2 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ನಾಯಕ ರಿಷಭ್‌ ಪಂತ್ ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರಿಷಭ್ ಪಂತ್ 36 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 39 ರನ್‌ ಬಾರಿಸಿ ಕೊನೆಯ ಓವರ್‌ನಲ್ಲಿ ರನೌಟ್ ಆದರು.