ಮುಂಬೈ ಇಂಡಿಯನ್ಸ್ ವಿರುದ್ದ ಅನಾಯಾಸವಾಗಿ ಗೆಲ್ಲಬಹುದಾಗಿದ್ದ ಪಂದ್ಯ ಸೋತ ಕೆಕೆಆರ್ ವಿರುದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಏ.14): ದಿನೇಶ್ ಕಾರ್ತಿಕ್ ಹಾಗೂ ಆ್ಯಂಡ್ರೆ ರಸೆಲ್ ಅವರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳು ಮುಂಬೈ ಇಂಡಿಯನ್ಸ್ ವಿರುದ್ದ ಕೊನೆಯ ಓವರ್‌ಗಳಲ್ಲಿ ಆಡಿದ ರೀತಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿಡಿಕಾರಿದ್ದು, ಕೆಕೆಆರ್ ಆಡಿದ ರೀತಿ ನಾಚಿಕೆ ಪಡುವಂತದ್ದು ಎಂದು ಹರಿಹಾಯ್ದಿದ್ದಾರೆ.
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಎದುರು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ಮುಂಬೈ ಇಂಡಿಯನ್ಸ್ ನೀಡಿದ್ದ 153 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತ ನೈಟ್ ರೈಡರ್ಸ್ ತಂಡವು ಒಂದು ಹಂತದಲ್ಲಿ 15 ಓವರ್ ಅಂತ್ಯದ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 20 ರನ್ ಗಳಿಸಿ 10 ರನ್ ಅಂತರದಲ್ಲಿ ಸೋಲೊಪ್ಪಿಕೊಂಡ ಬಗ್ಗೆ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ.
ಕ್ರಿಕ್‌ಬಜ್ ವೆಬ್‌ಸೈಟ್‌ನಲ್ಲಿ ಮಾತನಾಡಿದ ವೀರೂ, ಒಂದು ಹಂತದಲ್ಲಿ ಆರಾಮವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೋಲ್ಕತ ನೈಟ್ ರೈಡರ್ಸ್ ಸೋತಿದೆ. ರಸೆಲ್ ಬ್ಯಾಟಿಂಗ್ ಮಾಡಲಿಳಿದಾಗ ಕೆಕೆಆರ್ 27 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ಇನ್ನು ದಿನೇಶ್ ಕಾರ್ತಿಕ್ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದೊಂದು ನಾಚಿಕೆಗೇಡಿನ ಸೋಲು ಎಂದು ಕೆಕೆಆರ್ ಮೇಲೆ ಸೆಹ್ವಾಗ್ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
IPL 2021: ಕೆಕೆಆರ್ ಅಭಿಮಾನಿಗಳ ಕ್ಷಮೆ ಕೋರಿದ ಶಾರುಖ್ ಖಾನ್
ಮೊದಲ ಪಂದ್ಯದ ಬಳಿಕ ಇಯಾನ್ ಮಾರ್ಗನ್ ತಮ್ಮ ತಂಡ ಈ ಬಾರಿ ಪಾಸಿಟಿವ್ ಆಗಿ ಆಡಲಿದೆ ಎಂದಿದ್ದರು. ಆದರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲಿ ಆ ಲಕ್ಷಣಗಳು ಕಾಣಿಸಲಿಲ್ಲ. ಕಾರ್ತಿಕ್ ಹಾಗೂ ರಸೆಲ್ ಆಡಿದ ರೀತಿ ನೋಡಿದರೆ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿ ಮುಗಿಸುವಂತಿತ್ತು. ಆದರೆ ಅದು ಕೈಗೂಡಲಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಆ್ಯಂಡ್ರೆ ರಸೆಲ್ 15 ಎಸೆತಗಳನ್ನು ಎದುರಿಸಿ ಕೇವಲ 9 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ದಿನೇಶ್ ಕಾರ್ತಿಕ್ 11 ಎಸೆತಗಳನ್ನು ಎದುರಿಸಿ ಅಜೇಯರಾಗುಳಿದರು. ಕೆಕೆಆರ್ ಸೋಲಿಗೆ ಸಹಾ ಮಾಲೀಕ ಶಾರುಖ್ ಖಾನ್ ಸಹಾ ಅಸಮಾಧಾನ ಹೊರಹಾಕಿದ್ದು, ಟ್ವೀಟ್ ಮೂಲಕ ಕೆಕೆಆರ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದರು.
