ನವದೆಹಲಿ(ಏ.01): ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ತಂಡದ ನೂತನ ನಾಯಕರಾಗಿ ನೇಮಕಗೊಂಡಿರುವ ರಿಷಭ್‌ ಪಂತ್‌, ಭವಿಷ್ಯದಲ್ಲಿ ಭಾರತ ತಂಡದ ನಾಯಕನಾಗುತ್ತಾರೆ ಎಂದು ಭಾರತ ತಂಡದ ಮಾಜಿ ನಾಯಕ ಮೊಹಮದ್‌ ಅಜರುದ್ದೀನ್‌ ಭವಿಷ್ಯ ನುಡಿದಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಅಜರ್‌, ‘ಕಳೆದ ಕೆಲ ತಿಂಗಳುಗಳು ಪಂತ್‌ ಪಾಲಿಗೆ ಬಹಳ ಫಲದಾಯವಾಗಿದ್ದವು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅವರು ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಭವಿಷ್ಯದಲ್ಲಿ ಭಾರತ ತಂಡದ ನಾಯಕತ್ವಕ್ಕೆ ಆಯ್ಕೆಗಾರರು ಪಂತ್‌ರನ್ನು ಪರಿಗಣಿಸಿದರೆ ಅಚ್ಚರಿಯಿಲ್ಲ. ಅವರ ಆಕ್ರಮಣಕಾರಿ ಆಟ ಭಾರತ ತಂಡಕ್ಕೆ ಬಹಳಷ್ಟು ಲಾಭ ತಂದುಕೊಡಲಿದೆ’ ಎಂದಿದ್ದಾರೆ. ಪಂತ್‌ ಇದೇ ಮೊದಲ ಬಾರಿಗೆ ಐಪಿಎಲ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 23 ವರ್ಷದ ರಿಷಭ್‌ ಪಂತ್ ಇದೇ ಮೊದಲ ಬಾರಿಗೆ ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದು, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಥ್ಯಾಂಕ್ಯೂ ಎಂದ ನೂತನ ನಾಯಕ ರಿಷಭ್‌ ಪಂತ್‌

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ರಿಷಭ್‌ ಪಂತ್ ಪಾಲಿಗೆ ಅಷ್ಟೇನೂ ಫಲಪ್ರದವಾಗಿರಲಿಲ್ಲ. ಒಟ್ಟು 14 ಪಂದ್ಯಗಳನ್ನಾಡಿದ್ದ ರಿಷಭ್ ಪಂತ್ ಕೇವಲ ಒಂದು ಶತಕ ಸಹಿತ 343 ರನ್‌ ಬಾರಿಸಿದ್ದರು.  ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಸರಣಿ ಹಾಗೂ ಅಡಿಲೇಡ್‌ ಟೆಸ್ಟ್ ಪಂದ್ಯದಲ್ಲಿ ಪಂತ್ ಬೆಂಚ್‌ ಕಾಯಿಸಿದ್ದರು. ಆದಾದ ಬಳಿಕ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿರುವ ಪಂತ್‌, ಟೀಂ ಇಂಡಿಯಾ ಪಾಲಿಗೆ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.