ಮುಂಬೈ(ಏ.16): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಕ್ರಿಸ್ ಮೋರಿಸ್‌ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್‌ ನೇತೃತ್ವದ ರಾಯಲ್ಸ್‌ ತಂಡ 14ನೇ ಆವೃತ್ತಿಯ ಟೂರ್ನಿಯಲ್ಲಿ ಅಂಕಗಳ ಖಾತೆ  ತೆರೆದಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ 148 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ಒಂದು ಹಂತದಲ್ಲಿ 52 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌ 43 ಎಸೆತಗಳಲ್ಲಿ 62 ರನ್‌ ಹಾಗೂ ಕೊನೆಯಲ್ಲಿ ಕ್ರಿಸ್‌ ಮೋರಿಸ್‌ ಕೇವಲ 18 ಎಸೆತಗಳಲ್ಲಿ 36 ರನ್ ಚಚ್ಚುವ ಮೂಲಕ ರಾಯಲ್ಸ್‌ಗೆ ವಿರೋಚಿತ ಗೆಲುವು ತಂದುಕೊಟ್ಟರು. 

ಇದೀಗ ಪಂದ್ಯ ಮುಕ್ತಾಯದ ಬಳಿಕ ತಂಡದ ಸೋಲಿನ ಪರಾಮರ್ಶೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್‌, ಎರಡನೇ ಇನಿಂಗ್ಸ್‌ ವೇಳೆ ಇಬ್ಬನಿ ಬಿದ್ದಿದ್ದು ಬೌಲರ್‌ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡಿತು ಎಂದು ನೆಪ ಹೇಳಿದ್ದಾರೆ. 

ಆರಂಭದಲ್ಲಿ ನಮ್ಮ ಬೌಲರ್‌ಗಳು ತುಂಬಾ ಚೆನ್ನಾಗಿಯೇ ಬೌಲಿಂಗ್ ಮಾಡಿದರು. ಆದರೆ ಕೊನೆಯವರೆಗೂ ಅದೇ ಹಿಡಿತ ಕಾಪಾಡಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾದರು. ನಾವು ಇನ್ನೂ ಚೆನ್ನಾಗಿ ಬೌಲಿಂಗ್‌ ಮಾಡಬಹುದಿತ್ತು. ಆದರೆ ಕೊನೆಯಲ್ಲಿ ಇಬ್ಬನಿ ಹೆಚ್ಚಾಗಿ ಬಿದ್ದಿದ್ದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಲು ಬೌಲರ್‌ಗಳು ವಿಫಲರಾದರು. ಮೊದಲ ಇನಿಂಗ್ಸ್‌ಗೆ ಹೋಲಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚು ಇಬ್ಬನಿ ಕಾಟಕೊಟ್ಟಿತು ಎಂದು ಡೆಲ್ಲಿ ನಾಯಕ ಪಂತ್ ಹೇಳಿದ್ದಾರೆ.

ಮಿಲ್ಲರ್, ಮೋರಿಸ್ ಅಬ್ಬರಕ್ಕೆ ಪಂತ್ ಸೈನ್ಯ ಪಂಚರ್; ರಾಜಸ್ಥಾನಕ್ಕೆ ಮೊದಲ ಗೆಲುವು!

ನಾವು 15 ರಿಂದ 20 ರನ್ ಕಮ್ಮಿ ಬಾರಿಸಿದೆವು. ಈ ಪಂದ್ಯದಲ್ಲೂ ಸಾಕಷ್ಟು ಅನುಭವ ಪಡೆದಿದ್ದೇವೆ. ಬೌಲರ್‌ಗಳು ಆರಂಭದಲ್ಲಿ ಚೆನ್ನಾಗಿಯೇ ಬೌಲಿಂಗ್‌ ಮಾಡಿದರು. ಮುಂಬರುವ ಪಂದ್ಯಗಳಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಗೆಲುವಿನ ದಡ ಸೇರುವ ವಿಶ್ವಾಸವಿದೆ ಎಂದು ರಿಷಭ್‌ ಪಂತ್‌ ಹೇಳಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸ್ಟಿವ್‌ ಸ್ಮಿತ್ ಅಥವಾ ಶಿಮ್ರೋನ್‌ ಹೆಟ್ಮೇಯರ್‌ ಇಲ್ಲದೇ ಕಣಕ್ಕಿಳಿದಿತ್ತು. ಪವರ್‌ ಪ್ಲೇನಲ್ಲೇ ಆರಂಭಿಕರಾದ ಪೃಥ್ವಿ ಶಾ, ಶಿಖರ್ ಧವನ್‌ ಹಾಗೂ ಅಜಿಂಕ್ಯ ರಹಾನೆ ವಿಕೆಟ್‌ ಕಳೆದುಕೊಂಡಿದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತ್ತು.