* ಹಾಲಿ ಚಾಂಪಿಯನ್‌ ಮುಂಬೈಗೆ ಶಾಕ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್* ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಗ್ಗರಿಸಿದ ರೋಹಿತ್ ಶರ್ಮಾ ಪಡೆ* ಮುಂಬೈ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ವಿಕೆಟ್‌ಗಳ ರೋಚಕ ಜಯ

ಶಾರ್ಜಾ(ಅ.02): ಶ್ರೇಯಸ್‌ ಅಯ್ಯರ್ ಸಮಯೋಚಿತ ಬ್ಯಾಟಿಂಗ್(33*) ನೆರವಿನಿಂದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕೊನೆಯ ಓವರ್‌ನಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ ಹಾದಿ ಮತ್ತಷ್ಟು ದುರ್ಗಮವಾಗಿದೆ. 

ಮುಂಬೈ ಇಂಡಿಯನ್ಸ್‌ ನೀಡಿದ್ದ 130 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ನ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ 30 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಧವನ್ 8 ರನ್‌ ಗಳಿಸಿ ರನೌಟ್‌ ಆದರೆ ಪೃಥ್ವಿ ಆಟ ಕೇವಲ 6 ರನ್‌ಗಳಿಗೆ ಸೀಮಿತವಾಯಿತು. ಇನ್ನು ಸ್ಟೀವ್ ಸ್ಮಿತ್ 9 ರನ್‌ ಬಾರಿಸಿ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

Scroll to load tweet…

ಆರಂಭದಲ್ಲಿ ವಿಕೆಟ್‌ ಉರುಳಿದರೂ ನಾಯಕ ರಿಷಭ್‌ ಪಂತ್ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಪಂತ್ 22 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 26 ರನ್‌ ಬಾರಿಸಿದರಾದರೂ ಜಯಂತ್ ಯಾದವ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿದರು. ಇದಾದ ಬಳಿಕ ಕ್ರೀಸ್‌ಗಿಳಿದ ಅಕ್ಷರ್ ಪಟೇಲ್ 9 ಎಸೆತಗಳಲ್ಲಿ 9 ರನ್‌ ಬಾರಿಸಿ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.

IPL 2021: ಡೆಲ್ಲಿಗೆ ಸಾಧಾರಣ ಗುರಿ ನೀಡಿದ ಮುಂಬೈ ಇಂಡಿಯನ್ಸ್‌

ಶ್ರೇಯಸ್‌ ಏಕಾಂಗಿ ಹೋರಾಟ: ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ ಮಾಜಿ ನಾಯಕ ಶ್ರೇಯಸ್ ಅಯ್ಯರ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾದರು. 6ನೇ ವಿಕೆಟ್‌ಗೆ ಹೆಟ್ಮೇಯರ್ ಜತೆಗೂಡಿ 16 ರನ್‌ಗಳ ಉಪಯುಕ್ತ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಹೆಟ್ಮೇಯರ್ 8 ಎಸೆತಗಳಲ್ಲಿ 15 ರನ್‌ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. 7ನೇ ವಿಕೆಟ್‌ಗೆ ಅಯ್ಯರ್ ಹಾಗೂ ಅಶ್ವಿನ್‌ ಮುರಿಯದ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಅಯ್ಯರ್ 33 ಎಸೆತಗಳಲ್ಲಿ ಅಜೇಯ 33 ರನ್‌ ಬಾರಿಸಿದರೆ, ಅಶ್ವಿನ್‌ 21 ಎಸೆತಗಳಲ್ಲಿ 20 ರನ್‌ ಬಾರಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವೇಗಿ ಆವೇಶ್ ಖಾನ್‌ ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್‌ ಮಿಂಚಿನ ದಾಳಿಗೆ ತತ್ತರಿಸಿ ಹೋಯಿತು. ಈ ಇಬ್ಬರು ಬೌಲರ್‌ಗಳು ತಲಾ 3 ವಿಕೆಟ್ ಕಬಳಿಸುವುದಷ್ಟೇ ಅಲ್ಲದೇ ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ಗಳ ರನ್‌ ವೇಗಕ್ಕೂ ಕಡಿವಾಣ ಹಾಕಿದರು. ಮುಂಬೈ ಇಂಡಿಯನ್ಸ್‌ ಪರ ಸೂರ್ಯಕುಮಾರ್ ಯಾದವ್‌ 33 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು 20 ರನ್‌ಗಳ ಗಡಿ ದಾಟಲಿಲ್ಲ.