* ಶಾರ್ಜಾ ಪಿಚ್‌ನಲ್ಲಿ ಮತ್ತೊಮ್ಮೆ ಸಾಧಾರಣ ಮೊತ್ತ ದಾಖಲು* ಮೊದಲು ಬ್ಯಾಟಿಂಗ್ ಮಾಡಿ 129 ರನ್‌ ಗಳಿಸಿದ ಮುಂಬೈ ಇಂಡಿಯನ್ಸ್* ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 130 ರನ್‌ಗಳ ಸಾಧಾರಣ ಗುರಿ

ಶಾರ್ಜಾ(ಅ.02): ಶಾರ್ಜಾ ಮೈದಾನದಲ್ಲಿಂದು ಮತ್ತೊಂದು ಅಲ್ಪ ಮೊತ್ತದ ಸ್ಕೋರ್ ದಾಖಲಾಗಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ಪಾಲಿಗೆ ಮಾಡು ಇಲ್ಲವೇ ಮಡಿ ಎನಿಸಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 8 ವಿಕೆಟ್ ಕಳೆದುಕೊಂಡು ಕೇವಲ 129 ರನ್‌ ಬಾರಿಸಿದ್ದು, ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಗೆ ಸಾಧಾರಣ ಗುರಿ ನೀಡಿದೆ. 

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಆವೇಶ್‌ ತಾವೆಸೆದ ಮೊದಲ ಓವರ್‌ನಲ್ಲೇ ಮುಂಬೈ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಬಳಿಕ ಡಿ ಕಾಕ್‌ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈ ತಂಡಕ್ಕೆ ಕೊಂಚ ಆಸರೆಯಾಗುವ ಯತ್ನ ನಡೆಸಿದರು. ಡಿ ಕಾಕ್‌ 18 ಎಸೆತಗಳಲ್ಲಿ 19 ರನ್‌ ಬಾರಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು

Scroll to load tweet…

ಕೊನೆಗೂ ಫಾರ್ಮ್‌ಗೆ ಮರಳಿದ ಸೂರ್ಯ: ಕಳೆದ ಕೆಲವು ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಡೆಲ್ಲಿ ಎದುರು ಆತ್ಮವಿಶ್ವಾಸದಿಂದ ಬ್ಯಾಟ್‌ ಬೀಸುವ ಮೂಲಕ ಗಮನ ಸೆಳೆದರು. ಸೂರ್ಯ 26 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 33 ರನ್‌ ಬಾರಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಕಳೆದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ್ದ ಸೌರಭ್ ತಿವಾರಿ 15 ರನ್‌ ಬಾರಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.

IPL 2021: ಮುಂಬೈ ಎದುರು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ

ಡೆಲ್ಲಿ ಬೌಲರ್‌ಗಳು ಮುಂಬೈನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ ಸುಲಭವಾಗಿ ರನ್‌ ಗಳಿಸಲು ಅವಕಾಶ ಮಾಡಿಕೊಡಲಿಲ್ಲ. ಪೊಲ್ಲಾರ್ಡ್‌ 9 ಎಸೆತಗಳನ್ನು ಎದುರಿಸಿ ಕೇವಲ 6 ರನ್‌ ಗಳಿಸಿ ನೊಕಿಯೆ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಇನ್ನು ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 17 ರನ್ ಬಾರಿಸಿ ಆವೇಶ್‌ ಖಾನ್‌ಗೆ ಎರಡನೇ ಬಲಿಯಾದರೇ, ಅದೇ ಓವರ್‌ನಲ್ಲಿ ನೇಥನ್ ಕೌಲ್ಟರ್‌ ನೈಲ್ ಕೂಡಾ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಆವೇಶ್ ಖಾನ್‌ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಏನ್ರಿಚ್ ನೊಕಿಯೆ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು