* ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂದು ಕೋಲ್ಕತ ನೈಟ್ ರೈಡರ್ಸ್ ಸವಾಲು* ಸತತ 5ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ ರಿಷಭ್ ಪಂತ್ ಪಡೆ* ಕೆಕೆಅರ್ ಪಾಲಿಗಿಂದು ಮಾಡು ಇಲ್ಲವೇ ಮಡಿ ಪಂದ್ಯ
ಶಾರ್ಜಾ(ಸೆ.28): 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯಲ್ಲಿ ಗೆಲುವಿನ ಮೇಲೆ ಗೆಲುವು ಸಾಧಿಸಿ ಪ್ಲೇ-ಆಫ್ ಹೊಸ್ತಿಲಿಗೆ ಬಂದು ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್(Delhi Capitals), ಮಂಗಳವಾರ ಕೋಲ್ಕತ ನೈಟ್ ರೈಡರ್ಸ್(Kolkata Knight Riders) ವಿರುದ್ಧ ಜಯಭೇರಿ ಬಾರಿಸಿ, ಸತತ 5ನೇ ಗೆಲುವಿನೊಂದಿಗೆ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದ ಮೊದಲ ತಂಡವಾಗಿ ಹೊರಹೊಮ್ಮಲು ಕಾಯುತ್ತಿದೆ.
ಕೆಕೆಆರ್‌ನ ತಾರಾ ಆಲ್ರೌಂಡರ್ ಆ್ಯಂಡ್ರೆ ರಸೆಲ್(Andre Russell) ಗಾಯಗೊಂಡಿದ್ದು, ಮಹತ್ವದ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿರುವ ಕಾರಣ ಡೆಲ್ಲಿಯ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ, ಸತತವಾಗಿ ಸಾಂಘಿಕ ಪ್ರದರ್ಶನ ತೋರುತ್ತಿದ್ದು, ಕೆಕೆಆರ್ ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸುವ ವಿಶ್ವಾಸದಲ್ಲಿದೆ.
IPL 2021: ಕೊನೆಗೂ ಗೆಲುವಿನ ಸಿಹಿ ಕಂಡ SRH,ರಾಜಸ್ಥಾನಕ್ಕೆ ನಿರಾಸೆ!
10 ಪಂದ್ಯಗಳಿಂದ 8 ಅಂಕ ಕಲೆಹಾಕಿರುವ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಳ್ಳಬೇಕು ಎಂದರೆ ಮೊರ್ಗನ್ ಪಡೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ 26 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ತಂಡಗಳು ಒಂದು ರೀತಿ ಸಮಬಲದ ಪ್ರದರ್ಶನ ತೋರಿವೆ. 26 ಪಂದ್ಯಗಳ ಪೈಕಿ ಕೋಲ್ಕತ ನೈಟ್ ರೈಡರ್ಸ್ ತಂಡವು 14 ಬಾರಿಗೆ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಬಾರಿ ಗೆಲುವಿನ ನಗೆ ಬೀರಿದೆ.
ಇನ್ನು ಯುಎಇ ಚರಣದಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕೆಕೆಆರ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೊನೆಯ ಕ್ಷಣದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತು. ಇನ್ನು ಡೆಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಅಧಿಕಾರಯುತ ಗೆಲುವು ಸಾಧಿಸುತ್ತಾ ಬಂದಿತ್ತು, ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಶಿಮ್ರೊನ್ ಹೆಟ್ಮೇಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ, ಆನ್ರಿಚ್ ನೋಕಿಯ, ಆವೇಶ್ ಖಾನ್.
ಕೆಕೆಆರ್: ಶುಭ್‌ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೊರ್ಗನ್(ನಾಯಕ), ರಸೆಲ್/ಶಕೀಬ್, ದಿನೇರ್ಶ ಕಾರ್ತಿಕ್, ಸುನಿಲ್ ನರೇನ್, ಲಾಕಿ ಫಗ್ರ್ಯೂಸನ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
ಸ್ಥಳ: ಶಾರ್ಜಾ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
