ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ಮಾರಕ ವೇಗಿ ಕಗಿಸೋ ರಬಾಡ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.15): ದಕ್ಷಿಣ ಆಫ್ರಿಕಾ ಮೂಲದ ಮಾರಕ ವೇಗಿ ಕಗಿಸೋ ರಬಾಡ ಹೋಟೆಲ್‌ ಕ್ವಾರಂಟೈನ್‌ ಮುಗಿಸಿ ಬುಧವಾರ(ಏ.14) ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡಿಕೊಂಡು ಅಭ್ಯಾಸ ನಡೆಸಲಾರಂಭಿಸಿದ್ದಾರೆ. ಇದು ಡೆಲ್ಲಿ ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ.

ಹೌದು, 25 ವರ್ಷದ ಕಗಿಸೋ ರಬಾಡ ತವರಿನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಯನ್ನು ಅರ್ಧದಲ್ಲೇ ತೊರೆದು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿಳಿದಿದ್ದರು. ಇದೀಗ ಕ್ವಾರಂಟೈನ್‌ ಮುಗಿಸಿ ಇಂದು(ಏ.15) ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೆ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಯಿಂದ ಕಗಿಸೋ ರಬಾಡ ಅಭ್ಯಾಸ ನಡೆಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ರಬಾಡ ಪಾಕಿಸ್ತಾನ ವಿರುದ್ದದ ಮೊದಲೆರಡು ಏಕದಿನ ಪಂದ್ಯಗಳನ್ನಾಡಿ ಏಪ್ರಿಲ್‌ 06ರಂದು ಮುಂಬೈಗೆ ಬಂದಿಳಿದ್ದರು. ಇದಾದ ಬಳಿಕ ಹೋಟೆಲ್‌ನಲ್ಲಿಯೇ 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದರು.

IPL 2021 ಕುಗ್ಗಿರುವ ರಾಯಲ್ಸ್‌ಗೆ ಡೆಲ್ಲಿ ಸವಾಲು

ಕಗಿಸೋ ರಬಾಡ ಆಯ್ಕೆಗೆ ಲಭ್ಯವಿರುವುದರಿಂದ ಬಹುತೇಕ ಟಾಮ್ ಕರ್ರನ್‌ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡಿಕೊಳ್ಳಲಿದ್ದಾರೆ. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಬಾಡ 30 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು. ಡೆಲ್ಲಿ ತಂಡ ಕೂಡ ಮೊಟ್ಟ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತಾದರೂ, ಮುಂಬೈ ಇಂಡಿಯನ್ಸ್‌ಗೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.