ಮುಂಬೈ(ಏ.16):  ಅಬ್ಬರಿಸುತ್ತಿದ್ದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ದಿಢೀರ್ ಪೆವಿಲಿಯನ್ ಪರೇಡ್ ಆರಂಭಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ದಾಳಿಗೆ ನಲುಗಿದ ರಾಹುಲ್ ಸೈನ್ಯ ಒಂದೊಂದು ರನ್ ಕಲೆಹಾಕಲು ಪರದಾಡಿತು. ದೀಪಕ್ ಚಹಾರ್ ಆಟ್ಯಾಕ್‌ಗೆ ಪಂಜಾಬ್ ಕಿಂಗ್ಸ್ 8 ವಿಕೆಟ್ ಕಳೆದುಕೊಂಡು 106 ರನ್ ಸಿಡಿಸಿದೆ.

ಪಂಜಾಬ್ ಕಿಂಗ್ಸ್‌ಗೆ ಇದು ಅತ್ಯಂತ ಕಠಿಣ ಸವಲಾಗಿತ್ತು. ಕಾರಣ ದೀಪಕ್ ಚಹಾರ್ ದಾಳಿಗೆ ಪಂಜಾಬ್ ತಂಡದಲ್ಲಿ ಉತ್ತರವೇ ಇರಲಿಲ್ಲ. ಮಯಾಂಕ್ ಅಗರ್ವಾಲ್ ಡಕೌಟ್ ಆದರೆ, ನಾಯಕ ಕೆಎಲ್ ರಾಹುಲ್ 5 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಕ್ರಿಸ್ ಗೇಲ್ 10, ದೀಪಕ್ ಹೂಡ 10 ರನ್ ಸಿಡಿಸಿ ನಿರ್ಗಮಿಸಿದರು.

ಶಾರೂಖ್ ಖಾನ್ ಹೋರಾಟ ಪಂಜಾಬ್ ಕಿಂಗ್ಸ್ ತಂಡದ ಮಾನ ಕಾಪಾಡಿತು. ಆದರೆ ಇತರ ಯಾರಿಂದಲೂ ಸಾಥ್ ಸಿಗಲಿಲ್ಲ. ಜೇ ರಿಚರ್ಡ್ಸನ್, ಮರುಗನ್ ಅಶ್ವಿನ್ ಕೂಡ ನೆರವಾಗಲಿಲ್ಲ. ಶಾರೂಖ್ ಖಾನ್ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 100 ರನ್ ಗಡಿ ದಾಟಿತು. 

ಏಕಾಂಗಿ ಹೋರಾಟ ನೀಡಿದ ಶಾರೂಖ್ ಖಾನ್ 47 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿತು. ದೀಪಕ್ ಚಹಾರ್ 4 ವಿಕೆಟ್ ಕಬಳಿಸಿ ಮಿಂಚಿದರು.