* ದುಬೈನಲ್ಲಿ ನಡೆಯಲಿದೆ ಮುಂಬೈ-ಚೆನ್ನೈ ಹೈವೋಲ್ಟೇಜ್ ಪಂದ್ಯ* ದುಬೈ ಪಿಚ್‌ನಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುವ ಸಾಧ್ಯತೆ* ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚು ಲಾಭ..!

ದುಬೈ(ಸೆ.19): ಭಾರತ ಚುಟುಕು ಕ್ರಿಕೆಟ್‌ ಹಬ್ಬ ಇಂಡಿಯನ್‌ ಪ್ರೀಮಿಯರ್ ಲೀಗ್ ಯುಎಇ ಚರಣದ ಪಂದ್ಯಾಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ಮುಖಾಮುಖಿಗೆ ದುಬೈನ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ. 

ದುಬೈನ ಅಂತಾರಾಷ್ಟ್ರೀಯ ಮೈದಾನ ಈಗಾಗಲೇ ಹಲವು ಐಪಿಎಲ್‌ ಪಂದ್ಯಗಳಿಗೆ ಸಾಕ್ಷಿಯಾಗಿದೆ. 2020ನೇ ಸಾಲಿನ ಐಪಿಎಲ್‌ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿತ್ತು. ಉಭಯ ತಂಡಗಳು ಯುಎಇನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಧೋನಿ ಪಡೆ ಎದುರು ಮುಂಬೈ ಇಂಡಿಯನ್ಸ್‌ ಗೆದ್ದು ಬೀಗಿತ್ತು. ಇನ್ನು ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡುವಲ್ಲಿ ಸಿಎಸ್‌ಕೆ ತಂಡ ಯಶಸ್ವಿಯಾಗಿತ್ತು. ಇದೀಗ ಮದಗಜಗಳ ಕಾದಾಟ ಎಂದೇ ಬಿಂಬಿಸಲ್ಪಟ್ಟಿರುವ ಚೆನ್ನೈ ಹಾಗೂ ಮುಂಬೈ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ. ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿ ಕಂಡು ಬಂದಿದ್ದರೂ ಸಹಾ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ.

IPL 2021 ಚೆನ್ನೈ vs ಮುಂಬೈ ಸಂಭಾವ್ಯ ತಂಡ ಹೀಗಿವೆ ನೋಡಿ

ಕಡೆಯದಾಗಿ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಐಪಿಎಲ್‌ ಪಂದ್ಯ ನಡೆದದ್ದು, 2020ರ ಐಪಿಎಲ್‌ ಫೈನಲ್‌ನಲ್ಲಿ. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ದ ಮುಂಬೈ ಇಂಡಿಯನ್ಸ್‌ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ 5ನೇ ಬಾರಿಗೆ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಹೇಗೆ ಮಹತ್ವದ ಪಾತ್ರ ವಹಿಸಲಿದೆ? ಎಷ್ಟು ಟಿ20 ಪಂದ್ಯಗಳು ನಡೆದಿವೆ. ಈ ಪಿಚ್‌ನಲ್ಲಿ ಗರಿಷ್ಠ ಸ್ಕೋರ್ ಎಷ್ಟು? ಕನಿಷ್ಠ ಸ್ಕೋರ್ ಎಷ್ಟು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಇದುವರೆಗೂ ಒಟ್ಟು 93 ಟಿ20 ಪಂದ್ಯಗಳು ನಡೆದಿವೆ. 

* ಈ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 38 ಬಾರಿ ಗೆಲುವಿನ ನಗೆ ಬೀರಿದೆ

* ಇನ್ನು ಚೇಸಿಂಗ್ ಮಾಡಿದ ತಂಡವು ಹೆಚ್ಚು ಅಂದರೆ 54 ಬಾರಿ ಗೆಲುವಿನ ಸಿಹಿಯುಂಡಿದೆ.

* ದುಬೈನಲ್ಲಿ ಒಂದು ಪಂದ್ಯ ಟೈ ಆಗಿತ್ತು.

* ಸನ್‌ರೈಸರ್ಸ್‌ ಹೈದರಾಬಾದ್‌ ವರ್ಸಸ್‌ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಗರಿಷ್ಠ 219 ರನ್ ದಾಖಲಾಗಿತ್ತು.(2020)

* ಇನ್ನು ಪಿಎಸ್‌ಎಲ್‌ ಟೂರ್ನಿಯಲ್ಲಿ ಲಾಹೋರ್ ಖಲಂದರ್ ವರ್ಸಸ್‌ ಪೇಶಾವರ್ ಝಲ್ಮಿ ನಡುವಿನ ಪಂದ್ಯದಲ್ಲಿ ಕನಿಷ್ಠ 59 ರನ್‌ ದಾಖಲಾಗಿತ್ತ(2017)

* ದುಬೈ ಪಿಚ್‌ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದವರ ಸರಾಸರಿ ಸ್ಕೋರ್: 155 ರನ್