ಪಂಜಾಬ್ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ತಮಗೆ ಸ್ಟ್ರೈಕ್‌ ನೀಡದಿದ್ದುದರ ಬಗ್ಗೆ ರಾಜಸ್ಥಾನ ರಾಯಲ್ಸ್‌ ತಂಡದ ಸ್ಟಾರ್ ಆಲ್ರೌಂಡರ್‌ ಕ್ರಿಸ್‌ ಮೋರಿಸ್ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.16): ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ ರಾಯಲ್ಸ್‌ ತಂಡವನ್ನು ಕೊನೆಯ 2 ಓವರ್‌ಗಳಲ್ಲಿ 4 ಸಿಕ್ಸರ್‌ ಚಚ್ಚುವ ಮೂಲಕ ತಾವೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್‌ ಎನ್ನುವುದನ್ನು ಕ್ರಿಸ್‌ ಮೋರಿಸ್‌ ಸಾಬೀತು ಮಾಡಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಕೊನೆಯ ಎಸೆತದಲ್ಲಿ ಮೋರಿಸ್‌ಗೆ ಸ್ಟ್ರೈಕ್‌ ನೀಡಲು ನಿರಾಕರಿಸಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಐಪಿಎಲ್‌ ಇತಿಹಾಸದಲ್ಲಿಯೇ ದುಬಾರಿ ಮೊತ್ತಕ್ಕೆ(16.25 ಕೋಟಿ) ಹರಾಜಾದ ಆಟಗಾರ ಎನಿಸಿರುವ ಕ್ರಿಸ್‌ ಮೋರಿಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ತಮಗೆ ಸ್ಟ್ರೈಕ್‌ ನೀಡದ ಬಗ್ಗೆ ತುಟಿಬಿಚ್ಚಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನನಗೆ ಸಂಜು ಸ್ಟ್ರೈಕ್‌ ನೀಡದಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ. ಯಾಕೆಂದರೆ ಸಂಜು ಅಷ್ಟು ಚೆನ್ನಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ನಾನೆಷ್ಟು ಜೋರಾಗಿ ಓಡುತ್ತೇನೆಂದು ಕೆಲವರಿಗೆ ತಿಳಿದಿಲ್ಲ. ಅದೇ ರೀತಿ ಸಂಜು ಕೂಡಾ ಆಕರ್ಷಕವಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ನನಗೆ ಸ್ಟ್ರೈಕ್ ಸಿಗದ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಮೋರಿಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮಿಲ್ಲರ್, ಮೋರಿಸ್ ಅಬ್ಬರಕ್ಕೆ ಪಂತ್ ಸೈನ್ಯ ಪಂಚರ್; ರಾಜಸ್ಥಾನಕ್ಕೆ ಮೊದಲ ಗೆಲುವು!

ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ ಆಕರ್ಷಕ ಶತಕ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದರು. ಪಂಜಾಬ್ ವಿರುದ್ದ ಕೊನೆಯ ಎರಡು ಎಸೆತಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಆರ್ಶದೀಪ್‌ ಬೌಲಿಂಗ್‌ನ 5ನೇ ಎಸೆತದಲ್ಲಿ ಒಂಟಿ ರನ್ ಕದಿಯುವ ಅವಕಾಶವಿದ್ದರೂ ಸಂಜು ರನ್‌ ಓಡಲಿಲ್ಲ. ಇನ್ನು ಕೊನೆಯ ಎಸೆತದಲ್ಲಿ ಸಂಜು ಸಿಕ್ಸರ್‌ ಬಾರಿಸಲು ಯತ್ನಿಸಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಅಂತಿಮವಾಗಿ ಪಂಜಾಬ್ ತಂಡ 4 ರನ್‌ಗಳ ರೋಚಕ ಜಯ ಸಾಧಿಸಿತು.