ಯೂನಿವರ್ಸೆಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಶೂನ್ಯ ಸುತ್ತಿ ಅಪಖ್ಯಾತಿಯ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಏ.27): ಟಿ20 ಕ್ರಿಕೆಟ್‌ನ ಬ್ಯಾಟಿಂಗ್‌ ದೊರೆ ಕ್ರಿಸ್‌ ಗೇಲ್‌ ಅನಗತ್ಯ ದಾಖಲೆಯೊಂದಕ್ಕೆ ಗುರಿಯಾಗಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾದ ಗೇಲ್‌, ಟಿ20 ಕ್ರಿಕೆಟ್‌ನಲ್ಲಿ 29ನೇ ಬಾರಿಗೆ ಖಾತೆ ತೆರೆಯದೆ ಔಟಾದರು. 

ಇದರೊಂದಿಗೆ ಯೂನಿವರ್ಸೆಲ್‌ ಬಾಸ್‌ ಖ್ಯಾತಿಯ ಗೇಲ್ ಅತಿಹೆಚ್ಚು ಬಾರಿ ಡಕೌಟ್‌ ಆದ ಬ್ಯಾಟ್ಸ್‌ಮನ್‌ ಎನ್ನುವ ಅಪಖ್ಯಾತಿಗೆ ಪಾತ್ರರಾದರು. ಈ ಮೊದಲು ವೆಸ್ಟ್‌ ಇಂಡೀಸ್‌ನವರೇ ಆದ ಡ್ವೇನ್‌ ಸ್ಮಿತ್‌ 28 ಬಾರಿ ಡಕೌಟ್‌ ಆಗಿದ್ದರು. 422 ಟಿ20 ಪಂದ್ಯಗಳನ್ನು ಆಡಿರುವ ಗೇಲ್‌ ಈ ಮಾದರಿಯಲ್ಲಿ ಅತಿಹೆಚ್ಚು ರನ್‌, ಅತಿಹೆಚ್ಚು ಶತಕ, ಅರ್ಧಶತಕ, ಸಿಕ್ಸರ್‌, ಬೌಂಡರಿ, ಗರಿಷ್ಠ ವೈಯಕ್ತಿಕ ಮೊತ್ತ, ಅತಿವೇಗದ ಶತಕ, ಅತಿವೇಗದ ಅರ್ಧಶತಕ(ಜಂಟಿ)ದ ದಾಖಲೆ ಹೊಂದಿದ್ದಾರೆ. ಜೊತೆಗೀಗ ಅತಿಹೆಚ್ಚು ಡಕೌಟ್‌ ದಾಖಲೆಯೂ ಗೇಲ್ ಖಾತೆಗೆ ಸೇರಿಕೊಂಡಿದೆ.

ನಾಯಕ ಇಯಾನ್ ಮಾರ್ಗನ್ ಜವಾಬ್ದಾರಿಯುತ ಆಟ, ಕೆಕೆಆರ್‌ಗೆ 5 ವಿಕೆಟ್ ಗೆಲುವು!

ಕೋಲ್ಕತ ನೈಟ್‌ ರೈಡರ್ಸ್‌ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ 9 ವಿಕೆಟ್ ಕಳೆದುಕೊಂಡು ಕೇವಲ 123 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್‌ ಕೇವಲ 16.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.