Asianet Suvarna News Asianet Suvarna News

IPL 2021 ಚೆನ್ನೈ ವರ್ಸಸ್‌ ಕೆಕೆಆರ್‌ ಫೈನಲ್‌, ಐಪಿಎಲ್ ಕಪ್‌ ಯಾರಿಗೆ..?

* ಚೆನ್ನೈ ವರ್ಸಸ್‌ ಕೆಕೆಆರ್ ನಡುವಿನ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ

* 4ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಚೆನ್ನೈ ಸೂಪರ್ ಕಿಂಗ್ಸ್

* ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ

IPL 2021 Chennai Super Kings take on Kolkata Knight Riders in Dubai for Final Clash kvn
Author
Bengaluru, First Published Oct 15, 2021, 10:20 AM IST

ಬೆಂಗಳೂರು(ಅ.15): ಭಾರತೀಯ ಚುಟುಕು ಕ್ರಿಕೆಟ್‌ ಹಬ್ಬ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ 14ನೇ ಆವೃತ್ತಿಯ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್‌ (Kolkata Knight Riders) ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದು ಕಡೆ ಆರಂಭದಲ್ಲಿ ನೀರಸ ಪ್ರದರ್ಶನ ತೋರಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡವು ಯುಎಇ ಚರಣದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 4ನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿತು. ಬಳಿಕ ಶಾರ್ಜಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಎರಡನೇ ಕ್ವಾಲಿಫೈಯರ್ ಹಂತ ಪ್ರವೇಶಿಸಿತ್ತು. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಮಣಿಸುವ ಮೂಲಕ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.

ದಿಗ್ಗಜ ನಾಯಕರ ನಡುವಿನ ಕದನ: ಇಬ್ಬರು ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕರು ಇದೀಗ ಐಪಿಎಲ್‌ ಫೈನಲ್‌ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಮಾಡಲು ರಣತಂತ್ರ ಹೆಣೆಯುತ್ತಿದ್ದಾರೆ. ಕೆಕೆಆರ್ ಇದುವರೆಗೂ ಎರಡು ಬಾರಿ (2012 &2014) ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಎರಡು ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನೊಂದು ಕಡೆ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಈಗಾಗಲೇ ಮೂರು ಬಾರಿ ಐಪಿಎಲ್ ಟೂರ್ನಿ ಜಯಿಸಿದ್ದು, ನಾಲ್ಕನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕಳೆದ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿದ್ದ ಸಿಎಸ್‌ಕೆ, ಈ ಬಾರಿ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿತ್ತು. ಇನ್ನು ಧೋನಿ ಪಡೆ 9ನೇ ಬಾರಿಗೆ ಐಪಿಎಲ್‌ ಫೈನಲ್‌ ಕದನಕ್ಕೆ ಸಿದ್ದವಾಗಿದ್ದು, ಕೆಕೆಆರ್‌ಗೆ ಸೋಲುಣಿಸಿ ಕಪ್‌ಗೆ ಮುತ್ತಿಕ್ಕುವ ಲೆಕ್ಕಾಚಾರ ಹಾಕುತ್ತಿದ್ದಾರೆ ಕ್ಯಾಪ್ಟನ್ ಕೂಲ್‌ ಮಹೇಂದ್ರ ಸಿಂಗ್ ಧೋನಿ.

ಐಪಿಎಲ್ ಹೊಸ 2 ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

ಬಲಿಷ್ಠವಾಗಿದೆ ಕೆಕೆಆರ್ ಬ್ಯಾಟಿಂಗ್: ನಾಯಕ ಮಾರ್ಗನ್‌ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದರೂ ಅಗ್ರ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್, ಶುಭ್‌ಮನ್ ಗಿಲ್‌, ರಾಹುಲ್ ತ್ರಿಪಾಠಿ ಹಾಗೂ ನಿತೀಶ್ ರಾಣಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಜತೆಗೆ ರಸೆಲ್‌ ಇಂದಿನ ಪಂದ್ಯದಲ್ಲಿ ತಂಡ ಕೂಡಿಕೊಂಡರೆ ಮತ್ತಷ್ಟು ಬಲಿಷ್ಠವಾಗಲಿದೆ. ಆಲ್ರೌಂಡ್ ವಿಭಾಗದಲ್ಲಿ ಸುನಿಲ್ ನರೈನ್ ಟ್ರಂಪ್ ಕಾರ್ಡ್ ಎನಿಸಿಕೊಂಡಿದ್ದಾರೆ. ಇನ್ನು ಲಾಕಿ ಫರ್ಗ್ಯೂಸನ್‌, ಶಿವಂ ಮಾವಿ ಹಾಗೂ ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದು ತಂಡದ ಪ್ಲಸ್ ಪಾಯಿಂಟ್ ಎನಿಸಿದೆ.

ಸಮತೋಲಿತವಾಗಿ ಚೆನ್ನೈ ಸೂಪರ್ ಕಿಂಗ್ಸ್‌: ಧೋನಿ ನೇತೃತ್ವದ ಸಿಎಸ್‌ಕೆ ತಂಡಕ್ಕೆ ಋತುರಾಜ್ ಗಾಯಕ್ವಾಡ್‌ ಹಾಗೂ ಫಾಫ್ ಡು ಪ್ಲೆಸಿಸ್‌ ತಂಡಕ್ಕೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನು ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಹಾಗೂ ಮೋಯಿನ್ ಅಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುತ್ತಿದ್ದಾರೆ. ಕ್ಯಾಪ್ಟನ್ ಕೂಲ್ ಧೋನಿ ಫಾರ್ಮ್‌ಗೆ ಮರಳಿದ್ದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನಿಳಿದಂತೆ ಡ್ವೇನ್ ಬ್ರಾವೋ ಹಾಗೂ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಆಸರೆಯಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹೇಜಲ್‌ವುಡ್‌ ಜಾದೂ ಮಾಡಲು ಎದುರು ನೋಡುತ್ತಿದ್ದಾರೆ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ  7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow Us:
Download App:
  • android
  • ios