ನವದೆಹಲಿ(ಮೇ.06): ಕೋವಿಡ್ ಕಾರಣದಿಂದ ಮುಂದೂಡಿಕೆಯಾದ ಐಪಿಎಲ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದ ಕ್ಲೀನರ್ ಒಬ್ಬನ ಸಹಾಯ ಪಡೆದು ಬುಕ್ಕಿಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ. 

ಈ ವಿಚಾರವನ್ನು ಬಿಸಿಸಿಐ ಭದ್ರತಾ ದಳದ ಮುಖ್ಯಸ್ಥ ಶಬ್ದೀರ್ ಹುಸ್ಸೇನ್ ಬಹಿರಂಗಪಡಿಸಿದ್ದಾರೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯಿಂದ ಮಾನ್ಯತೆ ಪಡೆದ ಕ್ಲೀನರ್ ಒಬ್ಬ ಕ್ರೀಡಾಂಗಣದಲ್ಲಿದ್ದುಕೊಂಡು ಪಂದ್ಯದ ಮಾಹಿತಿಯನ್ನು ಬುಕ್ಕಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ. ಪಂದ್ಯದ ಪ್ರತಿ ಎಸೆತ ಹಾಗೂ ಟೀವಿಯಲ್ಲಿ ಅದರ ನೇರ ಪ್ರಸಾರದ ಮಧ್ಯೆ 7ರಿಂದ 8 ಸೆಕೆಂಡ್‌ಗಳ ಸಮಯವಿರುತ್ತದೆ. ಈ ಸಮಯದಲ್ಲಿ ಕ್ಲೀನರ್ ಬುಕ್ಕಿಗಳಿಗೆ ಮಾಹಿತಿ ರವಾನಿಸಿ, ಬಾಲ್ ಟು ಬಾಲ್ ಬೆಟ್ಟಿಂಗ್ ಗೆ ನೆರವು ನೀಡುತ್ತಿದ್ದ. 

ನಕಲಿ ಐಡಿ ಕಾರ್ಡ್‌ನೊಂದಿಗೆ ಸ್ಟೇಡಿಯಂಗೆ ಬಂದು ಸಿಕ್ಕಿಬಿದ್ದ ಇಬ್ಬರು ಬುಕ್ಕಿಗಳು..!

ಬಿಸಿಸಿಐ ಭದ್ರತಾ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಅನುಮಾನಿಸಿ, ಮೊಬೈಲ್ ಕಿತ್ತುಕೊಂಡು ಪರಿಶೀಲನೆ ನಡೆಸುವ ವೇಳೆ ಆ ಕ್ಲೀನರ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮುಂಬೈನಲ್ಲಿ ಸನ್‌ರೈಸರ್ಸ್‌ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ 3 ಬುಕ್ಕಿಗಳು ವಾಸ್ತವ್ಯ ಹೂಡಿದ್ದರು. ಆದರೆ ಬಯೋ ಬಬಲ್‌ನೊಳಗೆ ಪ್ರವೇಶಿಸಿ ಆಟಗಾರರ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಶಬ್ಬೀರ್ ತಿಳಿಸಿದ್ದಾರೆ