ಅಹಮದಾಬಾದ್(ಫೆ.19)‌: ಬರೋಬ್ಬರಿ 9.25 ಕೋಟಿ ರು.ಗೆ ಚೆನ್ನೈ ತಂಡಕ್ಕೆ ಖರೀದಿಯಾದ ಕರ್ನಾಟಕದ ಕೆ.ಗೌತಮ್‌ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ತಂಡದೊಂದಿಗೆ ನೆಟ್‌ ಬೌಲರ್‌ ಆಗಿ ಅಹಮದಾಬಾದ್‌ಗೆ ತೆರಳಿರುವ ಗೌತಮ್‌ ಹರಾಜು ಪ್ರಕ್ರಿಯೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. 

‘ಇಷ್ಟೊಂದು ದೊಡ್ಡ ಮೊತ್ತ ನಿರೀಕ್ಷಿಸಿರಲಿಲ್ಲ. ನಾನು ಚೆನ್ನೈ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ ನನ್ನ ಕೊಠಡಿಗೆ ಬಂದು ತಬ್ಬಿಕೊಂಡು, ಪಾರ್ಟಿ ಕೊಡಿಸುವಂತೆ ಕೇಳಿದರು. ವಿಡಿಯೋ ಕಾಲ್‌ನಲ್ಲಿ ನನ್ನ ತಂದೆ, ತಾಯಿ, ಪತ್ನಿ ಸಹ ಅಭಿನಂದಿಸಿ, ನನ್ನೊಂದಿಗೆ ಸಂಭ್ರಮಿಸಿದರು. ಧೋನಿ ನಾಯಕತ್ವದಲ್ಲಿ ಆಡುವುದು ನನಗೆ ಸಿಕ್ಕಿರುವ ಅದೃಷ್ಟ’ ಎಂದು ಗೌತಮ್‌ ಹೇಳಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೆ. ಗೌತಮ್‌ ಮಾತ್ರವಲ್ಲದೇ ಇಂಗ್ಲೆಂಡ್ ಆಲ್ರೌಂಡರ್‌ ಮೋಯಿನ್ ಅಲಿ(7 ಕೋಟಿ), ಚೇತೇಶ್ವರ್ ಪೂಜಾರ(50 ಲಕ್ಷ), ಹರಿಶಂಕರ್(20 ಲಕ್ಷ), ಭಗತ್ ವರ್ಮಾ(20 ಲಕ್ಷ) ಹಾಗೂ ಹರಿ ನಿಶಾಂತ್ ಹೀಗೆ ಒಟ್ಟು 6 ಆಟಗಾರರನ್ನು ಈ ಬಾರಿಯ ಹರಾಜಿನಲ್ಲಿ ಖರೀದಿಸಿದೆ.

IPL Auction 2021: ದಾಖಲೆ ಮೊತ್ತಕ್ಕೆ ಕನ್ನಡಿಗ ಕೆ ಗೌತಮ್‌ ಸೇಲ್!

ಗೌತಮ್‌ ದಾಖಲೆ: ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್‌ ಆದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಆಟಗಾರ ಎನ್ನುವ ದಾಖಲೆಯನ್ನು ಗೌತಮ್‌ ಬರೆದಿದ್ದಾರೆ. 2018ರಲ್ಲಿ 8.8 ಕೋಟಿಗೆ ಸೇಲ್‌ ಆಗಿದ್ದ ಕೃನಾಲ್‌ ಪಾಂಡ್ಯ ದಾಖಲೆಯನ್ನು ಕನ್ನಡಿಗ ಮುರಿದಿದ್ದಾರೆ.