ಬೆಂಗಳೂರು(ಏ.27): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 22ನೇ ಪಂದ್ಯದಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿದೆ. ಈ ಮದಗಜಗಳ ಕಾದಾಟಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ.

ಸದ್ಯ ಆಡಿದ 5 ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ 4 ಗೆಲುವು ಹಾಗೂ ಒಂದು ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿದ್ದು, ನೆಟ್‌ ರನ್‌ರೇಟ್‌ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3ನೇ ಸ್ಥಾನದಲ್ಲಿದೆ. ಇಂದು ಗೆಲುವು ಸಾಧಿಸುವ ತಂಡವು ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿವೆ. 

ಡೆಲ್ಲಿ ವರ್ಸಸ್‌ ಆರ್‌ಸಿಬಿ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳು ತಿಳಿದಿರಲೇಬೇಕಾದ ಕೆಲವೊಂದು ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ

* ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದುವರೆಗೂ 25 ಬಾರಿ ಮುಖಾಮುಖಿಯಾಗಿದ್ದು ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಂದಿರಲಿಲ್ಲ.

* ಹೀಗಿದ್ದೂ ಈ ಹಿಂದಿನ ನಾಲ್ಕು ಮುಖಾಮುಖಿಯಲ್ಲಿ ಆರ್‌ಸಿಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, 4 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನ ನಗೆ ಬೀರಿದೆ.

IPL 2021: ಇಲ್ಲಿದೆ ನೋಡಿ ಆರ್‌ಸಿಬಿ ವರ್ಸಸ್‌ ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

* ಡೆಲ್ಲಿ ವಿರುದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಧ್ಬುತ ಫಾರ್ಮ್‌ ಹೊಂದಿದ್ದು 59.80 ಸರಾಸರಿಯಲ್ಲಿ 897 ರನ್‌ ಬಾರಿಸಿದ್ದಾರೆ. ಈ ಮೂಲಕ ಡೆಲ್ಲಿ ವಿರುದ್ದ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

* ಆರ್‌ಸಿಬಿ ಆಪತ್ಭಾಂಧವ ಎಬಿ ಡಿವಿಲಿಯರ್ಸ್‌ ಇನ್ನು ಕೇವಲ 22 ರನ್‌ ಬಾರಿಸಿದರೆ, ಐಪಿಎಲ್‌ನಲ್ಲಿ 5 ಸಾವಿರ ರನ್‌ ಪೂರೈಸಲಿದ್ದಾರೆ. ಹೀಗಾದಲ್ಲಿ ಡೇವಿಡ್ ವಾರ್ನರ್‌ ಬಳಿಕ ಐಪಿಎಲ್‌ನಲ್ಲಿ 5 ಸಾವಿರ ರನ್ ಬಾರಿಸಿದ ಎರಡನೇ ವಿದೇಶಿ ಬ್ಯಾಟ್ಸ್‌ಮನ್ ಎನ್ನುವ ಶ್ರೇಯಕ್ಕೆ ಎಬಿ ಡಿವಿಲಿಯರ್ಸ್‌ ಪಾತ್ರರಾಗಲಿದ್ದಾರೆ.

* ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಇನ್ನು ಕೇವಲ 8 ರನ್‌ ಬಾರಿಸಿದರೆ ಐಪಿಎಲ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಇದರೊಂದಿಗೆ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಬಳಿಕ ಐಪಿಎಲ್‌ನಲ್ಲಿ ಸಾವಿರ ರನ್‌ ಬಾರಿಸಿದ ಮೂರನೇ ಕಿರಿಯ ಬ್ಯಾಟ್ಸ್‌ಮನ್‌ ಎನ್ನುವ ಗೌರವಕ್ಕೆ ಪೃಥ್ವಿ ಪಾತ್ರರಾಗಲಿದ್ದಾರೆ.

* ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್‌ ಪಟೇಲ್‌ ಇನ್ನೊಂದು ವಿಕೆಟ್ ಕಬಳಿಸಿದರೆ, ಆರ್‌ಸಿಬಿ ಪರ 50 ವಿಕೆಟ್ ಕಬಳಿಸಿದ ಮೂರನೇ ಬೌಲರ್‌ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈ ಮೊದಲು ವಿನಯ್ ಕುಮಾರ್ ಹಾಗೂ ಯುಜುವೇಂದ್ರ ಚಹಲ್ ಅರ್‌ಸಿಬಿ ಪರ 50+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.