ದುಬೈ(ಜು.18): 2020ರ ಐಪಿ​ಎಲ್‌ ಟೂರ್ನಿ ಆಯೋಜಿ​ಸಲು ಯುನೈ​ಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಕ್ರಿಕೆಟ್‌ ಸಂಸ್ಥೆ ಎಲ್ಲ ರೀತಿಯ ಸಿದ್ಧತೆ ಮಾಡಿ​ಕೊಂಡಿದ್ದು, ಬಿಸಿ​ಸಿಐನಿಂದ ಅಧಿ​ಕೃತ ಪ್ರಕ​ಟಣೆಯಷ್ಟೇ ಬಾಕಿ ಇದೆ. 

ಕ್ರೀಡಾಂಗಣಗಳಲ್ಲಿ ಪಿಚ್‌ ಸಿದ್ಧ ಪಡಿ​ಸಿದ್ದು, ಅಭ್ಯಾಸಕ್ಕೂ ಸೂಕ್ತ ವ್ಯವಸ್ಥೆ ಮಾಡ​ಲಾ​ಗಿದೆ ಎಂದು ದುಬೈ ಕ್ರೀಡಾಂಗಣದ ಮುಖ್ಯಸ್ಥ ಸಲ್ಮಾನ್‌ ಹನೀಫ್‌, ಶುಕ್ರ​ವಾರ ಮಾಧ್ಯ​ಮ​ಗ​ಳಿಗೆ ಮಾಹಿತಿ ನೀಡಿ​ದ್ದಾರೆ. ದುಬೈ, ಅಬು​ಧಾಬಿ, ಶಾರ್ಜಾದಲ್ಲಿ ಪಂದ್ಯ​ಗ​ಳನ್ನು ಆಯೋ​ಜನೆಗೊಳ್ಳಲಿವೆ ಎಂದು ಸ್ಥಳೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. ಆಟ​ಗಾ​ರರು, ಸಿಬ್ಬಂದಿಯ ವಾಸ್ತ​ವ್ಯಕ್ಕೆ ಕ್ರೀಡಾಂಗಣಗಳ ಸುತ್ತ​ಮುತ್ತಲಿನ ಹೋಟೆಲ್‌ಗಳ​ನ್ನು ಬಿಸಿ​ಸಿಐ ಈಗಾ​ಗಲೇ ಗುರು​ತಿ​ಸಿ​ದೆ ಎನ್ನ​ಲಾ​ಗಿದೆ.

ಕುಮಟಾದಿಂದ ಟೀಂ ಇಂಡಿಯಾವರೆಗೆ: ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞನ ರೋಚಕ ಸ್ಟೋರಿಯಿದು..!

ಮಾರ್ಚ್ 29ರಿಂದ ಮೇ 17ರವರೆಗೆ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಕೊರೋನಾ ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈಗಾಗಲೇ ಏಷ್ಯಾಕಪ್ ಹಾಗೂ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಈ 2 ಟೂರ್ನಿಗಳು ಮುಂದೂಡಲ್ಪಟ್ಟಿರುವುದು ಐಪಿಎಲ್ ಆಯೋಜನೆಗೆ ಇನ್ನಷ್ಟು ಬಲ ಬಂದಂತಾಗಿದೆ. 

ಯುಎಇನಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐಗೆ ಹೊಸದೇನಲ್ಲ. 2014ರ ಲೋಕಸಭಾ ಚುನಾವಣೆ ವೇಳೆ ಅರ್ಧದಷ್ಟು ಟೂರ್ನಿಯು ದುಬೈನಲ್ಲೇ ನಡೆದಿತ್ತು. ಇದೀಗ ದುಬೈನಲ್ಲಿ ಪೂರ್ಣ ಪ್ರಮಾಣದಲ್ಲಿ ಟೂರ್ನಿ ನಡೆಯುವ ಸಾಧ್ಯತೆಯಿದೆ.