ನವ​ದೆ​ಹ​ಲಿ[ನ.14]: 2020ರ ಐಪಿ​ಎಲ್‌ನಲ್ಲಿ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡ​, ಕಿಂಗ್ಸ್ ಇಲೆವನ್ ಕರ್ನಾಟಕ ಎಂದು ಬದಲಾದರೂ ಅಚ್ಚರಿಯಿಲ್ಲ. ಕಿಂಗ್ಸ್ ತಂಡದಲ್ಲಿ ಕನ್ನಡದ ಕಲರವ ಕೇಳಿಬರಲಿದೆ. ಯಾಕೆಂದರೆ ಪಂಜಾಬ್ ತಂಡದಲ್ಲಿ ಕರ್ನಾ​ಟ​ಕದ ಆಟ​ಗಾ​ರರೇ ಹೆಚ್ಚಿರ​ಲಿದ್ದಾರೆ.

ಕನ್ನಡಿಗ ಗೌತಮ್‌ಗೆ ಆಗ್ತಿದೆ ಭಾರೀ ಅನ್ಯಾಯ..!

ಅಪ್ಪಟ ಕನ್ನಡಿಗ ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗುತ್ತಿದ್ದಂತೆ, ಕನ್ನಡಿಗರಿಗೆ ಮಣೆಹಾಕಿದ್ದಾರೆ. ಇದರ ಭಾಗವಾಗಿ ವೇಗಿ ಪಂಜಾಬ್ ವೇಗಿ ಅಂಕಿತ್‌ ರಜ​ಪೂತ್‌ರನ್ನು ರಾಜಸ್ಥಾನಕ್ಕೆ ಬಿಟ್ಟುಕೊಟ್ಟು, ಕನ್ನಡಿಗ ಆಲ್ರೌಂಡರ್‌ ಕೆ. ಗೌ​ತಮ್‌ರನ್ನು ಕಿಂಗ್ಸ್‌ ಇಲೆ​ವೆನ್‌ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆ. ಗೌತಮ್ ಇತ್ತೀಚೆಗಷ್ಟೇ ಮುಕ್ತಾಯವಾದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಸ್ಫೋಟಕ ಶತಕ ಹಾಗೆಯೇ 15 ರನ್ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. 

ತಂಡದಲ್ಲಿ ಮಹತ್ತರ ಬದಲಾವಣೆ ಇದೆ ಎಂದ CSK !

ಅನಿಲ್‌ ಕುಂಬ್ಳೆ ಕಿಂಗ್ಸ್‌ ಇಲೆ​ವೆನ್‌ನ ಕೋಚ್‌ ಆಗಿದ್ದು, ತಂಡ​ದಲ್ಲಿ ಕೆ.ಎಲ್‌.ರಾ​ಹುಲ್‌, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಜೆ.ಸು​ಚಿತ್‌ ಇದ್ದಾರೆ. ಇದೀಗ ಗೌತಮ್ ಸಹ ತಂಡ ಸೇರಿಕೊಂಡಿದ್ದು, ಕನ್ನಡಿಗರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ನ್ಯೂಜಿ​ಲೆಂಡ್‌ ವೇಗಿ ಟ್ರೆಂಟ್‌ ಬೌಲ್ಟ್‌ರನ್ನು ಮುಂಬೈ ಇಂಡಿ​ಯನ್ಸ್‌ಗೆ ಬಿಟ್ಟು​ಕೊ​ಟ್ಟಿದೆ.

ಬೇರೆ-ಬೇರೆ ಫ್ರಾಂಚೈಸಿಗಳು ಕರ್ನಾಟಕದ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದರೆ, ಬೆಂಗಳೂರು ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಬಗ್ಗೆ ಅಸಡ್ಡೆ ತೋರುತ್ತಲೇ ಬಂದಿದೆ. 11ನೇ ಆವೃತ್ತಿಯಲ್ಲಿ ಪವನ್ ದೇಶ್‌ಪಾಂಡೆ ಹಾಗೂ ಅನಿರುದ್ಧ್ ಜೋಶಿಯನ್ನು ಖರೀದಿಸಿದ್ದರು, ಒಂದು ಪಂದ್ಯವನ್ನಾಡಲು ಅವಕಾಶ ನೀಡಿರಲಿಲ್ಲ. ಇನ್ನು 12ನೇ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತಾದರೂ, ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಮಾಡಿತ್ತು. ಇದೀಗ ಮುಂಬರುವ ಆಟಗಾರರ ಹರಾಜಿನಲ್ಲಾದರೂ ಕನ್ನಡಿಗರಿಗೆ ಆರ್‌ಸಿಬಿ ಮಣೆ ಹಾಕುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

2020ರ ಐಪಿಎಲ್ ಟೂರ್ನಿಗೂ ಮುನ್ನ, ಇದೇ ಡಿಸೆಂಬರ್ 19ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಮುಂದಿನ ಆವೃ​ತ್ತಿಗೆ ತಂಡ​ಗಳು ಉಳಿ​ಸಿ​ಕೊ​ಳ್ಳಲು ಇಚ್ಛಿ​ಸುವ ಆಟ​ಗಾ​ರ​ರ ಪಟ್ಟಿ​ಯನ್ನು ಪ್ರಕ​ಟಿ​ಸಲು ಗುರು​ವಾರ ಕೊನೆ ದಿನ​ವಾ​ಗಿದೆ.