128 ವರ್ಷದ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್, ಟಿ20 ಮಾದರಿಗೆ IOC ಅನುಮತಿ!
ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಪ್ಪಿಗೆ ನೀಡಿದೆ. ಈ ಮೂಲಕ ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ.
ಮುಂಬೈ(ಆ.16) ಕ್ರಿಕೆಟ್ ತನ್ನ ಜಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಬಳಿಕ ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಒಲಿಂಪಿಕ್ಸ್ ಸೇರ್ಪಡೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅನುಮೋದನೆ ನೀಡಿದೆ. ಮುಂಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) 141ನೇ ಅಧಿವೇಶನದಲ್ಲಿ ಈ ಮಹತ್ವದ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಬೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುತ್ತಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಅದಿಕೃತಗೊಂಡಿದೆ. ಟಿ20 ಮಾದರಿ ಕ್ರಿಕೆಟ್ ಆಡಿಸಲು IOC ಒಪ್ಪಿಗೆ ಸೂಚಿಸಿದೆ. 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆಯಾಗಲಿದೆ. ಕ್ರಿಕೆಟ್ ಜೊತೆಗೆ ಐದು ಪ್ರಮುಖ ಕ್ರೀಡೆಗಳನ್ನು ಒಲಿಂಪಿಕ್ಸ್ ಸೇರಿಸಲು ಅನುಮೋದನೆ ಸಿಕ್ಕಿದೆ. ಬೇಸ್‌ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ ಹಾಗೂ ಸ್ಕ್ವಾಶ್ ಕ್ರೀಡೆಯನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಳಿಸಲಾಗಿದೆ.
2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ , ಐಒಸಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಘೋಷಣೆ!
1990ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಹಾಗೂ ಕೊನೆಯ ಬಾರಿಗೆ ಕ್ರಿಕೆಟ್ ಆಡಿಸಲಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಯಲ್ಲಿ 2 ತಂಡಗಳು ಮಾತ್ರ ಪಾಲ್ಗೊಂಡಿತ್ತು. ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡ ಮಾತ್ರ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪಾಲ್ಗೊಂಡಿತ್ತು. ಟೆಸ್ಟ್ ಮಾದರಿಯಲ್ಲಿ ಕ್ರಿಕೆಟ್ ಆಯೋಜನೆಗೊಂಡಿತ್ತು. ಗ್ರೇಟ್ ಬ್ರಿಟನ್ ಗೋಲ್ಡ್ ಮೆಡಲ್ ಪಡೆದಿದ್ದರೆ, ಫ್ರಾನ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು.
ಮುಂಬೈನಲ್ಲಿ ನಡೆಯುತ್ತಿರುವ ಒಲಿಂಪಿಕ್ ಸಮಿತಿಯ 141ನೇ ಅಧಿವೇಶನದಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಅಕ್ಟೋಬರ್ 14 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಈ ಅಧಿವೇಶನ ಉದ್ಘಾಟಿಸಿದ್ದರು. ಅಕ್ಟೋಬರ್ 15 ರಿಂದ 17ರ ವರೆಗೆ ಅಧಿವೇಶನ ನಡೆಯಲಿದೆ. ಕತಾರ್, ಜೋರ್ಡಾನ್, ಮೊನಾಕೊ, ಲಕ್ಸಂಬರ್ಗ್ ಮತ್ತು ಭೂತಾನ್ ದೇಶಗಳ ಮುಖ್ಯಸ್ಥರು, ಗ್ರೇಟ್ ಬ್ರಿಟನ್ ಮತ್ತು ಲಿಕ್ಟನ್ ಸ್ಟೈನ್‌ನ ರಾಜಮನೆತನದ ಸದಸ್ಯರು ಈ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.
ಐಒಸಿ ಅಧಿವೇಶನವು ಒಲಿಂಪಿಕ್ ಕ್ರೀಡಾಕೂಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ವೋಚ್ಚ ಸಂಸ್ಥೆಯಾಗಿದೆ. ಇದು ಒಲಿಂಪಿಕ್ ಚಾರ್ಟರ್ ಅನ್ನು ಅಳವಡಿಸಿಕೊಳ್ಳುವುದು ಅಥವಾ ಪರಿಷ್ಕರಿಸುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಒಲಿಂಪಿಕ್ಸ್‌ನ ಆತಿಥೇಯ ನಗರವನ್ನು ಆಯ್ಕೆ ಮಾಡುವುದು ಒಳಗೊಂಡಿರುತ್ತದೆ. ಉದಾಹರಣೆಗೆ, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಚರ್ಚೆಯು ಭರದಿಂದ ಸಾಗುತ್ತಿದೆ ಮತ್ತು ಅದನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರಿಸಲು ನಿರ್ಧಾರ ತೆಗೆದುಕೊಂಡಲ್ಲಿ ಮುಂಬೈನಲ್ಲಿ ನಡೆಯುವ ಐಒಸಿ ಅಧಿವೇಶನದಲ್ಲಿ ಅದನ್ನು ಘೋಷಿಸಲಾಗುತ್ತದೆ.