ಲಾರ್ಡ್ಸ್ ಟೆಸ್ಟ್ 4ನೇ ದಿನದಾಟದಲ್ಲಿ ಭಾರತಕ್ಕೆ ಹಿನ್ನಡೆ 2ನೇ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಲು ಅಡೆ ತಡೆ 6 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ
ಲಂಡನ್(ಆ.15): ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. 4ನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಹೋರಾಟ ಹೊರತು ಪಡಿಸಿದರೆ ಇತರರಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ಹೀಗಾಗಿ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿದೆ.
2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಆಸರೆಯಾಗಲಿಲ್ಲ. ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಜೊತೆಯಾಟ ಟೀಂ ಇಂಡಿಯಾಗೆ ನೆರವಾಯಿತು.
55 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 4 ವಿಕೆಟ್‌ಗೆ 100 ರನ್ ಜೊತೆಯಾಟ ನೀಡಿತು. ಪೂಜಾರ 45 ರನ್ ಕಾಣಿಕೆ ನೀಡಿದರು. ಇತ್ತ ರಹಾನೆ ಅರ್ಧಶತಕ ಸಿಡಿಸಿ ಮಿಂಚಿದರು. ರಹಾನೆ 61 ರನ್ ಸಿಡಿಸಿ ಔಟಾದರು. ಜಡೇಜಾ ಕೂಡ ಬಹುಬೇಗನೆ ಪೆವಿಲಯನ್ ಸೇರಿದರು.
ರಿಷಬ್ ಪಂತ್ ಅಜೇಯ 14 ರನ್ ಹಾಗೂ ಇಶಾಂತ್ ಶರ್ಮಾ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನದಾಟದ ಅಂತ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 181 ರನ್ ಸಿಡಿಸಿದೆ. ಈ ಮೂಲಕ 154 ರನ್ ಮುನ್ನಡೆ ಪಡೆದುಕೊಂಡಿದೆ.
