INDvAUS ಬೆಂಗಳೂರಲ್ಲಿ ಶ್ರೇಯಸ್ ಅಯ್ಯರ್ ಹೋರಾಟ, ಆಸ್ಟ್ರೇಲಿಯಾಗೆ 161 ರನ್ ಟಾರ್ಗೆಟ್!
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹೋರಾಟದಿಂದ ಭಾರತ ಸ್ಪರ್ಧಾತ್ಮಕ ಮೊತ್ತ ಸಿಡಿಸುವಲ್ಲಿ ಯಶಸ್ವಿಯಾಗಿದೆ. ಅಯ್ಯರ್ ಹಾಫ್ ಸೆಂಚುರಿಯಿಂದ ಭಾರತ 160 ರನ್ ಸಿಡಿಸಿದೆ.
ಬೆಂಗಳೂರು(ಡಿ.03) ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಭಾರತ ಅಂತಿಮ ಟಿ20 ಪಂದ್ಯದಲ್ಲಿ ನಿರೀಕ್ಷಿತ ಅಬ್ಬರ ಇರಲಿಲ್ಲ. ದಿಢೀರ್ ವಿಕೆಟ್ ಪತನ, ಮಳೆಯಿಂದ ತೇವಗೊಂಡ ಪಿಚ್ ಸೇರಿದಂತೆ ಹಲವು ಕಾರಣಗಳಿಂದ ಭಾರತ ರನ್ ರೇಟ್ ನಿಧಾನವಾಯಿತು. ಆದರೆ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟ ಭಾರತವನ್ನು ಕಾಪಾಡಿತು. ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿದೆ.
ಚಂಡಮಾರುತ ಪರಿಣಾಮ ಬೆಂಗಳೂರಿನಲ್ಲೂ ಮಳೆ ವಕ್ಕರಿಸುತ್ತಿದೆ. ಟಾಸ್‌ಗೂ ಮೊದಲು ಪಿಚ್ ಕವರ್ ಮಾಡಲಾಗಿತ್ತು. ಮಳೆಯಿಂದ ಮೈದಾನದ ತೇವವಾಗಿತ್ತು. ಸ್ಲೋ ಪಿಚ್‌ನಲ್ಲಿ ಭಾರತ ಅಬ್ಬರಿಸಲು ವಿಫಲವಾಯಿತು. ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಜೊತೆಯಾಟ 33 ರನ್‌ಗೆ ಅಂತ್ಯವಾಯಿತು. ಜೈಸ್ವಾಲ್ 21 ರನ್ ಸಿಡಿಸಿ ಔಟಾದರೆ, ರುತುರಾಜ್ 10 ರನ್ ಸಿಡಿಸಿ ಔಟಾದರು.
ಕಾಂಗ್ರೆಸ್ ಚುನಾವಣಾ ಸೋಲಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!
ಶ್ರೇಯಸ್ ಅಯ್ಯರ್ ಹೋರಾಟ ಆರಂಭಗೊಂಡಿತು. ಆದರೆ ಅಯ್ಯರ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಫಿನೀಶರ್ ರಿಂಕು ಸಿಂಗ್ 6 ರನ್ ಸಿಡಿಸಿ ನಿರ್ಗಮಿಸಿದರು. ಜಿತೇಶ್ ಶರ್ಮಾ ಹಾಗೂ ಅಯ್ಯರ್ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಜಿತೇಶ್ 24 ರನ್ ಸಿಡಿಸಿ ನಿರ್ಗಮಿಸಿದರು.
ಅಕ್ಸರ್ ಪಟೇಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಶ್ರೇಯಸ್ ಅಯ್ಯರ್ ಸ್ಪರ್ಧಾತ್ಮಕ ಮೊತ್ತ ಸಿಡಿಸಿದರು. ಇತ್ತ ಅಕ್ಸರ್ 31 ರನ್ ಸಿಡಿಸಿ ಔಟಾದರು.ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿದರು. ಇದರ ಬೆನ್ನಲ್ಲೇ ಅಯ್ಯರ್ ವಿಕೆಟ್ ಪತನಗೊಂಡಿದೆ. ಅಯ್ಯರ್ 53 ರನ್ ಕಾಣಿಕೆ ನೀಡಿದರು. ಅಂತಿಮ ಎಸೆತದಲ್ಲಿ ರವಿ ಬಿಶ್ನೋಯ್ ವಿಕೆಟ್ ಪತನಗೊಂಡಿತು. ಭಾರತ 8 ವಿಕೆಟ್ ಕಳೆದುಕೊಂಡು 160 ರನ್ ಸಿಡಿಸಿತು.
ಭಾರತೀಯ ಕ್ರಿಕೆಟಿಗರು ಎಲ್ಲೆಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ ನೋಡಿ!
ಭಾರತ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಈಗಾಗಲೇ ಮೈಲುಗೈ ಸಾಧಿಸಿದೆ. 3 ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿ ಕೈವಶ ಮಾಡಿದೆ. ಇದೀಗ ಗೆಲುವಿನ ಅಂತರ ಹೆಚ್ಚಿಸುವ ತವಕದಲ್ಲಿದೆ. ಅಂತಿಮ ಪಂದ್ಯದಲ್ಲಿ ಗೆದ್ದು ವಿದಾಯ ಹೇಳಲು ಆಸ್ಟ್ರೇಲಿಯಾ ಸಜ್ಜಾಗಿದೆ.ಇದೀಗ 161 ರನ್ ಟಾರ್ಗೆಟ್ ಭಾರತ ಡಿಫೆಂಡ್ ಮಾಡಿಕೊಳ್ಳುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.