ಕನ್ನಡಿಗ ಮಯಾಂಕ್ ಅಗರ್‌ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಮೂರನೇ ಮೂರಂಕಿ ಮೊತ್ತ ದಾಖಲಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಇಂದೋರ್[ನ.15]: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಮತ್ತೊಂದು ಶತಕ ಬಾರಿಸಿದ್ದಾರೆ. ಇದು ಮಯಾಂಕ್ ಬಾರಿಸಿದ ಮೂರನೇ ಟೆಸ್ಟ್ ಶತಕವಾಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಬಾರಿಸಿದ್ದ ಮಯಾಂಕ್ ಅಗರ್‌ವಾಲ್ ಎರಡನೇ ದಿನ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ದಿನದಾಟದ ಆರಂಭದಿಂದಲೇ ಪೂಜಾರ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಮಯಾಂಕ್ ಆಸರೆಯಾದರು. 183 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಶತಕ ಪೂರೈಸಿದರು. ಇಂದಿಗೆ 50 ವರ್ಷಗಳ ಹಿಂದೆ ಕನ್ನಡಿಗ ಗುಂಡಪ್ಪ ವಿಶ್ವನಾಥ್ ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು, ಇಂದು ಮತ್ತೋರ್ವ ಕನ್ನಡಿಗ ಶತಕ ಸಿಡಿಸಿ ಮಿಂಚಿದ್ದಾರೆ.
ಇಂದೋರ್ ಟೆಸ್ಟ್: 2ನೇ ದಿನ ಟೀಂ ಇಂಡಿಯಾಗೆ ಬಿಗ್ ಶಾಕ್..!
ದಕ್ಷಿಣ ಆಫ್ರಿಕಾ ವಿರುದ್ಧ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ್ದ ಮಯಾಂಕ್, ಪುಣೆಯಲ್ಲಿ ಶತಕ ಬಾರಿಸಿದ್ದರು. ಇದೀಗ ಇಂದೋರ್’ನಲ್ಲಿ ಮತ್ತೊಂದು ಶತಕ ಕನ್ನಡಿಗನ ಪಾಲಾಗಿದೆ. ಭಾರತ ತಂಡವು 63 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿದ್ದು, ಮಯಾಂಕ್ 105 ಹಾಗೂ ಅಜಿಂಕ್ಯ ರಹಾನೆ 44 ರನ್ ಬಾರಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.
