* ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ* ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ*  ಆಸೀಸ್‌ ಮಹಿಳಾ ವೇಗಿ ಮೆಗನ್‌ ಶ್ಯುಟ್‌ಯಿಂದ ಮಾಹಿತಿ ಬಹಿರಂಗ

ನವದೆಹಲಿ(ಮೇ.17): ಭಾರತ ಮಹಿಳಾ ಕ್ರಿಕೆಟ್‌ ತಂಡ ಸೆಪ್ಟೆಂಬರ್‌ನಲ್ಲಿ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ವಿಷಯವನ್ನು ಆಸೀಸ್‌ ಮಹಿಳಾ ವೇಗಿ ಮೆಗನ್‌ ಶ್ಯುಟ್‌ ಬಹಿರಂಗಪಡಿಸಿದ್ದಾರೆ.

ಕೋವಿಡ್‌ ಬಳಿಕ ಏಕೈಕ ಸರಣಿಯನ್ನು ಆಡಿರುವ ಭಾರತ ಮುಂದಿನ ತಿಂಗಳು ಇಂಗ್ಲೆಂಡ್‌ಗೆ ತೆರಳಲಿದ್ದು, 7 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಿದೆ. ಜೊತೆಗೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇಂಗ್ಲೆಂಡ್‌ನಿಂದ ವಾಪಸಾದ ಬಳಿಕ ತಂಡ ಆಸ್ಪ್ರೇಲಿಯಾಗೆ ತೆರಳುವ ಸಾಧ್ಯತೆ ಇದೆ. ಈ ವಿಷಯವನ್ನು ಆಸೀಸ್‌ ಮಹಿಳಾ ವೇಗಿ ಮೆಗನ್‌ ಶ್ಯುಟ್‌ ಬಹಿರಂಗಪಡಿಸಿದ್ದಾರೆ. ನಾವು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಭಾರತ ವಿರುದ್ದ ಪಂದ್ಯವನ್ನಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ

ಇಂಗ್ಲೆಂಡ್‌ ಆಟಗಾರ್ತಿಯರಾದ ಕೇಟ್‌ ಕ್ರಾಸ್‌ ಹಾಗೂ ಅಲೆಕ್ಸ್‌ ಹಾಟ್ರ್ಲೆ ಜೊತೆ ಆನ್‌ಲೈನ್‌ ಸಂವಾದ ವೇಳೆ ಶ್ಯುಟ್‌, ಸೆಪ್ಟೆಂಬರ್‌ನಲ್ಲಿ ಭಾರತ ವಿರುದ್ಧ ಸರಣಿ ಇರುವುದಾಗಿ ತಿಳಿಸಿದ್ದಾರೆ. ಆದರೆ ಕ್ರಿಕೆಟ್‌ ಆಸ್ಪ್ರೇಲಿಯಾ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲ. ಪ್ರವಾಸದಲ್ಲಿ ಭಾರತ, ಆಸೀಸ್‌ ವಿರುದ್ಧ ಟಿ20, ಏಕದಿನ ಸರಣಿಗಳನ್ನು ಆಡಲಿದೆ ಎನ್ನಲಾಗಿದೆ.

ಈ ಹಿಂದೆ ನಡೆದ ಅಪೆಕ್ಸ್‌ ಸಭೆಯಲ್ಲಿ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಮುಂದಿನ ವರ್ಷ(2022) ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವಭಾವಿ ಸಿದ್ದತೆಗಾಗಿ ಭಾರತ ಮಹಿಳಾ ತಂಡ ಕಾಂಗರೂ ನಾಡಿನಲ್ಲಿ ಸೀಮಿತ ಓವರ್‌ಗಳ ಸರಣಿ ಆಡಲಿದೆ ಎನ್ನಲಾಗಿದೆ.